Vikrant Rona Review: ಸಸ್ಪೆನ್ಸ್ ಕಥೆಯ ‘ರಂಗು’ ಹೆಚ್ಚಿಸಿದ ಸುದೀಪ್-ಅನೂಪ್​; ಇಷ್ಟವಾಗುತ್ತೆ ಕಿಚ್ಚನ ಗೆಟಪ್

ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಇಂದು (ಜುಲೈ 28) ತೆರೆಗೆ ಬಂದಿದೆ. ಸಿನಿಪ್ರಿಯರು ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆ ತಲುಪಲು ಸಿನಿಮಾ ಯಶಸ್ಸು ಪಡೆಯಿತೇ? ಟಿವಿ9 ಕನ್ನಡ ಡಿಜಿಟಲ್ ವಿಮರ್ಶೆಯಲ್ಲಿದೆ ಉತ್ತರ.

Important Highlight‌
Vikrant Rona Review: ಸಸ್ಪೆನ್ಸ್ ಕಥೆಯ ‘ರಂಗು’ ಹೆಚ್ಚಿಸಿದ ಸುದೀಪ್-ಅನೂಪ್​; ಇಷ್ಟವಾಗುತ್ತೆ ಕಿಚ್ಚನ ಗೆಟಪ್
ಸುದೀಪ್​-ಜಾಕ್ವೆಲಿನ್
Follow us
Rajesh Duggumane
|

Updated on:Jul 28, 2022 | 10:44 AM

ಸಿನಿಮಾ: ವಿಕ್ರಾಂತ್ ರೋಣ

ಪಾತ್ರವರ್ಗ: ಸುದೀಪ್, ಜಾಕ್ವೆಲಿನ್ ಫರ್ನಾಂಡಿಸ್, ನೀತಾ ಅಶೋಕ್, ನಿರೂಪ್ ಭಂಡಾರಿ ಮೊದಲಾದವರು..

ನಿರ್ದೇಶನ: ಅನೂಪ್ ಭಂಡಾರಿ

ಇದನ್ನೂ ಓದಿ
Image
Vikrant Rona: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಮೊದಲಾರ್ಧದ ವಿಮರ್ಶೆ ಇಲ್ಲಿದೆ
Image
‘ವಿಕ್ರಾಂತ್​ ರೋಣ’ ರಿಲೀಸ್​ಗೂ ಮುನ್ನ ಸುದೀಪ್​ಗೆ ಪ್ರೀತಿಯಿಂದ ವಿಶ್ ಮಾಡಿದ ನಿರ್ದೇಶಕ ರಾಜಮೌಳಿ
Image
ಬೆಳ್ಳಂಬೆಳಗ್ಗೆಯೇ ಅಬ್ಬರಿಸ್ತಾನೆ ‘ವಿಕ್ರಾಂತ್​ ರೋಣ’; ಮೊದಲ ದಿನದ ಟಿಕೆಟ್​ಗಳು ಸೋಲ್ಡ್​ ಔಟ್​
Image
‘ವಿಕ್ರಾಂತ್ ರೋಣ’ ಪ್ರೀ-ರಿಲೀಸ್​ನಲ್ಲಿ ಮಗಳಿಗಾಗಿ ಸುಮಧುರವಾಗಿ ಹಾಡು ಹಾಡಿದ ಸುದೀಪ್​; ಇಲ್ಲಿದೆ ವಿಡಿಯೋ

ನಿರ್ಮಾಣ: ಜಾಕ್ ಮಂಜು

ಸ್ಟಾರ್​: 3.5/5

ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಯಾವಾಗಲೂ ಒಂದಷ್ಟು ವಿಶೇಷತೆ ಇರುತ್ತದೆ. ತೆರೆಮೇಲೆ ಅವರ ಮ್ಯಾನರಿಸಂ, ಆ್ಯಕ್ಷನ್ ನೋಡೋದೇ ಫ್ಯಾನ್ಸ್​ಗೆ ಹಬ್ಬ. ಈಗ ‘ವಿಕ್ರಾಂತ್ ರೋಣ’ ಚಿತ್ರದ ಮೂಲಕ ಸುದೀಪ್ ಅವರು ಸಸ್ಪೆನ್ಸ್ ಕಥೆಯನ್ನು ಹೊತ್ತು ತಂದಿದ್ದಾರೆ ಎಂಬುದು ಟ್ರೇಲರ್ ಮೂಲಕವೇ ಮನವರಿಕೆ ಆಗಿತ್ತು. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಹಾಡುಗಳು ಸೃಷ್ಟಿಸಿದ ಹೈಪ್ ತುಂಬಾ ದೊಡ್ಡದು. ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. 3ಡಿಯಲ್ಲಿ ಮೂಡಿಬಂದ ‘ವಿಕ್ರಾಂತ್ ರೋಣ’ ಚಿತ್ರದ ವಿಮರ್ಶೆ ಇಲ್ಲಿದೆ.

ಕಮರೊಟ್ಟು ಗ್ರಾಮ. ಇದು ಕರಾವಳಿಯಲ್ಲಿರುವ ಒಂದು ಕಾಲ್ಪನಿಕ ಊರು. ಇಲ್ಲಿ ಭೂತಾರಾಧಕರಿದ್ದಾರೆ. ಊರಿನಲ್ಲಿ ನಡೆಯುತ್ತಿರುವ ಮಕ್ಕಳ ಕೊಲೆಗೆ ಕಮರೊಟ್ಟು ಮನೆಯಲ್ಲಿ ವಾಸವಾಗಿರುವ ಬ್ರಹ್ಮ ರಾಕ್ಷಸ ಎಂದು ನಂಬಿದವರಿದ್ದಾರೆ. ಈ ಊರಿಗೆ ವಿಕ್ರಾಂತ್ ರೋಣ (ಸುದೀಪ್​), ಸಂಜು (ನಿರೂಪ್ ಭಂಡಾರಿ) ಆಗಮನ ಆಗುತ್ತದೆ. ಆ ಕೊಲೆಗಳು ನಡೆಯುತ್ತಿರುವುದೇಕೆ? ವಿಕ್ರಾಂತ್​ ರೋಣ, ಸಂಜುಗೂ ಕಥೆಗೂ ಏನು ಸಂಬಂಧ ಅನ್ನೋದನ್ನು ಸಿನಿಮಾದಲ್ಲಿ ಕಣ್ತುಂಬಿಕೊಳ್ಳಬೇಕು.

ಸುದೀಪ್ ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಕಮರ್ಷಿಯಲ್ ಸಿನಿಮಾಗಳನ್ನು ಮಾಡಿದ್ದಾರೆ. ಅವೆಲ್ಲಕ್ಕಿಂತ ಈ ಚಿತ್ರ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿ ಮಾಸ್ ಡೈಲಾಗ್ ಇಲ್ಲ. ಮರ ಸುತ್ತುವ ದೃಶ್ಯಗಳಿಲ್ಲ. ಮಗಳಿಗೆ ಓರ್ವ ತಂದೆಯಾಗಿ, ಊರಿನ ಜನರನ್ನು ಕಾಯುವ ಪೊಲೀಸ್ ಆಗಿ ಸುದೀಪ್ ಇಷ್ಟವಾಗುತ್ತಾರೆ. ಭಿನ್ನ ಮ್ಯಾನರಿಸಂನಿಂದ ಅವರು ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಅವರು ಚಿತ್ರಕ್ಕೆ ಹೊಸ ಎನರ್ಜಿ ನೀಡಿದ್ದಾರೆ.

ಅನೂಪ್ ಭಂಡಾರಿ ಅವರು ‘ರಂಗಿತರಂಗ’ ಸಿನಿಮಾದಿಂದ ದೊಡ್ಡ ಮಟ್ಟದ ಯಶಸ್ಸು ಕಂಡರು. ಆ ಕಾರಣಕ್ಕೋ ಏನೋ ಅಲ್ಲಿ ಬಳಕೆ ಆಗಿದ್ದ ಅನೇಕ ತಂತ್ರವನ್ನು ಇಲ್ಲಿಯೂ ಅಳವಡಿಕೆ ಮಾಡಿದ್ದಾರೆ. ಇದು ಚಿತ್ರಕ್ಕೆ ಪ್ಲಸ್​ ಕೂಡ ಹೌದು, ಮೈನಸ್ ಕೂಡ ಹೌದು. ‘ರಂಗಿತರಂಗ’ಕ್ಕೂ ‘ವಿಕ್ರಾಂತ್ ರೋಣ’ ಚಿತ್ರಕ್ಕೂ ಅನೇಕ ವಿಚಾರಗಳಲ್ಲಿ ಸಾಮ್ಯತೆ ಇದೆ. ಇದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ಅನೂಪ್ ಭಂಡಾರಿ ಅವರು 3ಡಿ ಮೂಲಕ ‘ವಿಕ್ರಾಂತ್​ ರೋಣ’ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಅವರ ಈ ಪ್ರಯತ್ನಕ್ಕೆ ಭೇಷ್​ ಎನ್ನಲೇ ಬೇಕು. ಅವರು ಈ ವಿಚಾರದಲ್ಲಿ ಒಂದು ಹಂತಕ್ಕೆ ಗೆದ್ದಿದ್ದಾರೆ. ಆದರೆ, ಕೆಲವು ದೃಶ್ಯಗಳಲ್ಲಿ ಕೆಲ ವಸ್ತುಗಳು, ವ್ಯಕ್ತಿಗಳು ಬ್ಲರ್ ಆಗಿ ಕಾಣಿಸುತ್ತವೆ. ಇದು ಚಿತ್ರಮಂದಿರದ ತಾಂತ್ರಿಕ ಸಮಸ್ಯೆಯೋ ಅಥವಾ ನಿಜಕ್ಕೂ ಇರುವುದೇ ಹಾಗೋ ಎಂಬ ಗೊಂದಲ ಹಾಗೆಯೇ ಉಳಿದಿದೆ.

ಇಡೀ ಚಿತ್ರ ಸಸ್ಪೆನ್ಸ್ ಮೂಲಕ ಸಾಗುತ್ತದೆ. ಇದಕ್ಕೆ ಅನೂಪ್ ಭಂಡಾರಿ ಅವರು ಹಾಸ್ಯ ಹಾಗೂ ಭಾವನಾತ್ಮಕ ವಿಚಾರಗಳ ಒಗ್ಗರಣೆ ನೀಡಿ ಒಂದೊಳ್ಳೆಯ ಅಡುಗೆ ತಯಾರಿಸುವ ಪ್ರಯತ್ನ ಮಾಡಿದ್ದಾರೆ. ಸಿನಿಮಾದ ಬಹುತೇಕ ದೃಶ್ಯಗಳು ಸೆಟ್​ನಲ್ಲೇ ಶೂಟ್ ಮಾಡಲಾಗಿದೆ. ಆದಾಗ್ಯೂ ಎಲ್ಲವೂ ನೈಜ ಎಂಬಂತಹ ಫೀಲ್ ಕೊಡುತ್ತದೆ. ಈ ವಿಚಾರದಲ್ಲಿ ಆರ್ಟ್​ ಡೈರೆಕ್ಟರ್​ ಶಿವಕುಮಾರ್ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಲೇಬೇಕು.

ಹಿನ್ನೆಲೆ ಸಂಗೀತ, ಸಂಗೀತ ಸಂಯೋಜನೆ ಮಾಡಿದ ಅಜನೀಶ್ ಲೋಕನಾಥ್ ಹಾಗೂ ಛಾಯಾಗ್ರಾಹಕ ವಿಲಿಯಮ್​ ಡೇವಿಡ್​ ಅವರ ಕೆಲಸ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಬರುವ ಒಂದೇ ಶಾಟ್​ನ ಫೈಟಿಂಗ್ ದೃಶ್ಯ ಮೈನವಿರೇಳಿಸುತ್ತದೆ. ಕ್ಲೈಮ್ಯಾಕ್ಸ್ ದೃಶ್ಯ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದೆ. ಸುದೀಪ್ ಅಬ್ಬರ ಇಷ್ಟವಾಗುತ್ತದೆ.

ನಿರೂಪ್ ಭಂಡಾರಿ ಅವರು ಈ ಚಿತ್ರದಲ್ಲಿ ಭಿನ್ನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ನೀತಾ ಅಶೋಕ್, ರವಿಶಂಕರ್ ಗೌಡ, ವಾಸುಕಿ ವೈಭವ್​, ರಮೇಶ್ ಕುಕ್ಕುವಲ್ಲಿ, ಚಿತ್ಕಲಾ ಬಿರಾದಾರ್​ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರು ‘ರಾ ರಾ ರಕ್ಕಮ್ಮ’ ಹಾಡಿನಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದು, ಈ ಹಾಡಿಗೆ ಸಿಳ್ಳೆ ಗ್ಯಾರಂಟಿ.

ಸಿನಿಮಾ ಅಲ್ಲಲ್ಲಿ ನಿಧಾನ ಎನಿಸುತ್ತದೆ. ಅನೇಕ ದೃಶ್ಯಗಳು ಅಪೂರ್ಣ ಎನಿಸುತ್ತವೆ. ಅಪೂರ್ಣ ಎನಿಸಿದ ದೃಶ್ಯಗಳಿಗೆ ಒಂದು ಜಸ್ಟಿಫಿಕೇಶನ್ ನೀಡಿದ್ದರೆ ಸಿನಿಮಾ ಮತ್ತಷ್ಟು ಸುಂದರ ಎನಿಸುತ್ತಿತ್ತು. ಅಲ್ಲಲ್ಲಿ ಅನಾವಶ್ಯಕವಾಗಿ ಪ್ರೇಕ್ಷಕರನ್ನು ಹೆದರಿಸುವ ಕೆಲಸವೂ ಆಗಿದೆ. ಚಿತ್ರದಲ್ಲಿ ಬರುವ ಕೆಲ ಹಾಡುಗಳು ಹಾಗೂ ದೃಶ್ಯಗಳು ಹೆಚ್ಚುವರಿ ಎನಿಸಬಹುದು. ಕೆಲ ಸೀನ್​ಗಳಲ್ಲಿ ಲಾಜಿಕ್​ನ ಕೊರತೆ ಕಾಣುತ್ತದೆ. ‘ರಂಗಿ ತರಂಗ’ ಶೇಡ್​ ಈ ಚಿತ್ರದಲ್ಲಿ ಕೊಂಚ ಹೆಚ್ಚೇ ಕಾಣಿಸುತ್ತದೆ ಅನ್ನೋದು ಒಪ್ಪಿಕೊಳ್ಳಬೇಕಾದ ಸತ್ಯ.

Published On - 10:42 am, Thu, 28 July 22

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು