ಸಿನಿಮಾ: ಧೂಮಂ
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
ನಿರ್ದೇಶನ: ಪವನ್ ಕುಮಾರ್
ಪಾತ್ರವರ್ಗ: ಫಹಾದ್ ಫಾಸಿಲ್, ಅಪರ್ಣಾ ಬಾಲಮುರಳಿ, ರೋಶನ್ ಮ್ಯಾಥ್ಯೂ, ಅಚ್ಯುತ್ ಕುಮಾರ್ ಮುಂತಾದವರು.
ಸ್ಟಾರ್: 2.5/5
2016ರಲ್ಲಿ ‘ಯೂಟರ್ನ್’ ಸಿನಿಮಾ ಬಳಿಕ ಬಳಿಕ ನಿರ್ದೇಶಕ ಪವನ್ ಕುಮಾರ್ (Pawan Kumar) ಅವರು ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿರಲಿಲ್ಲ. ಪರಭಾಷೆಯ ಪ್ರಾಜೆಕ್ಟ್ಗಳಲ್ಲಿ ಅವರು ಬ್ಯುಸಿ ಆಗಿದ್ದರು. ಈಗ ಅವರು ನಿರ್ದೇಶಿಸಿದ ‘ಧೂಮಂ’ ಸಿನಿಮಾ ಬಿಡುಗಡೆ ಆಗಿದೆ. ಇದು ಮೂಲ ಮಲಯಾಳಂ ಚಿತ್ರ ಎಂದೇ ಹೇಳಬಹುದು. ಇದರಲ್ಲಿ ನಟಿಸಿರುವ ಬಹುತೇಕ ಕಲಾವಿದರು ಮಲಯಾಳಂ ಚಿತ್ರರಂಗದವರು. ಆದರೆ ತೆರೆ ಹಿಂದೆ ಕೆಲಸ ಮಾಡಿರುವ ನಿರ್ದೇಶಕ ಪವನ್ ಕುಮಾರ್, ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ (Hombale Films), ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮುಂತಾದವರು ಕನ್ನಡದವರು. ಹಾಗಾಗಿ ಕನ್ನಡದಲ್ಲೂ ‘ಧೂಮಂ’ ಸಿನಿಮಾ ತೆರೆಕಂಡಿದೆ. ಫಹಾದ್ ಫಾಸಿಲ್ (Fahadh Faasil) ಅವರು ಈ ಸಿನಿಮಾದ ಹೀರೋ. ಅವರಿಗೆ ಜೋಡಿಯಾಗಿ ನಟಿ ಅಪರ್ಣಾ ಬಾಲಮುರಳಿ ಅಭಿನಯಿಸಿದ್ದಾರೆ. ರೋಶನ್ ಮ್ಯಾಥ್ಯೂ, ಅಚ್ಯುತ್ ಕುಮಾರ್ ಮುಂತಾದವರು ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಒಟ್ಟಾರೆ ಈ ಚಿತ್ರ ಹೇಗಿದೆ? ಸಿನಿಮಾದ ಪ್ಲಸ್ ಏನು? ಮೈನಸ್ ಏನು ಅಂತ ತಿಳಿಯಲು ‘ಧೂಮಂ’ ಸಿನಿಮಾ ವಿಮರ್ಶೆ ಓದಿ…
‘ಧೂಮಂ’ ಸಿನಿಮಾದಲ್ಲಿ ‘ಯೂಟರ್ನ್’ ಚಿತ್ರದ ಛಾಯೆ ಕಾಣಿಸುತ್ತದೆ. ಸಮಾಜದಲ್ಲಿನ ಒಂದು ರಿಯಲ್ ಸಮಸ್ಯೆಯನ್ನು ಇಟ್ಟುಕೊಂಡು ಪವನ್ ಕುಮಾರ್ ಅವರು ಈ ಸಿನಿಮಾ ಮಾಡಿದ್ದಾರೆ. ಸಿಗರೇಟ್ ಸೇದುವುದರಿಂದ ಆಗುವ ಪರಿಣಾಮಗಳನ್ನು ಮನವರಿಕೆ ಮಾಡಿಸುವ ಪ್ರಯತ್ನ ಈ ಚಿತ್ರದಲ್ಲಿ ಆಗಿದೆ. ಹಾಗಂತ ಎಲ್ಲಿಯೂ ನಿರ್ದೇಶಕರು ಬೋಧನೆ ಮಾಡಿಲ್ಲ. ಅದರ ಬದಲು ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಎಲ್ಲವನ್ನೂ ವಿವರಿಸಲಾಗಿದೆ. ಆದರೆ ಅದು ಕೊಂಚ ತ್ರಾಸದಾಯಕ ಆಗಿದೆ ಎನಿಸುತ್ತದೆ.
ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಚಾಲಾಕಿತನ ಇರುವಂತಹ ಅವಿನಾಶ್ (ಫಹಾದ್ ಫಾಸಿಲ್) ಒಂದು ಸಿಗರೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಜನರು ಹೆಚ್ಚು ಸಿಗರೇಟು ಸೇದುವಂತೆ ಮಾಡುವುದು ಆತನ ಕೆಲಸ. ಆ ಕ್ಷೇತ್ರದಲ್ಲಿ ಅವನಿಗೆ ಯಶಸ್ಸು ಕೂಡ ಸಿಗುತ್ತದೆ. ಆದರೆ ಅದೇ ಯಶಸ್ಸು ಅವನಿಗೆ ಅಪಾಯವನ್ನೂ ತಂದೊಡ್ಡುತ್ತದೆ. ಅದು ಹೇಗೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು. ಸಿಗರೇಟ್ ಸೇದುವುದು ಅಪಾಯಕಾರಿ ಎಂದು ಗೊತ್ತಿದ್ದರೂ ಕೂಡ ಅದಕ್ಕೆ ದಾಸರಾಗಿರುವವರ ಬಗ್ಗೆ ‘ಧೂಮಂ’ ಸಿನಿಮಾ ಯಾವುದೇ ರೀತಿಯಲ್ಲೂ ಕನಿಕರ ತೋರಿಸುವುದಿಲ್ಲ. ಆದರೆ ಎನೂ ತಪ್ಪು ಮಾಡದೇ, ಸಿಗರೇಟ್ನಿಂದ ತೊಂದರೆಗೆ ಒಳಗಾದವರ ಬಗ್ಗೆ ಕಾಳಜಿ ವಹಿಸುವ ಗುಣ ಈ ಕಥೆಗೆ ಇದೆ.
ಇದನ್ನೂ ಓದಿ: Matthe Maduve Review: ಅವರು ಯಾಕೆ ‘ಮತ್ತೆ ಮದುವೆ’ ಆದರು? ಉತ್ತರ, ಸಮರ್ಥನೆ, ಸ್ಪಷ್ಟನೆ ಎಲ್ಲವೂ ಇದೆ ಇಲ್ಲಿ
ಪವನ್ ಕುಮಾರ್ ಅವರು ಆಯ್ದುಕೊಂಡಿರುವ ವಿಷಯ ತುಂಬ ಪ್ರಸ್ತುತವಾಗಿದೆ. ಎಲ್ಲಿಯವರೆಗೆ ಸಿಗರೇಟ್ ಹಾವಳಿ ಇರುತ್ತದೋ ಅಲ್ಲಿಯವರೆಗೂ ಈ ಸಿನಿಮಾ ಕಥೆ ಫ್ರೆಶ್ ಆಗಿರುತ್ತದೆ. ಸಿಗರೇಟ್ ಸೇದುವ ಪ್ರತಿ ವ್ಯಕ್ತಿಗೂ ಈ ಸಿನಿಮಾ ಕನೆಕ್ಟ್ ಆಗುತ್ತದೆ. ಧೂಮಪಾನ, ಮದ್ಯಪಾನದ ರೀತಿಯ ಬಿಸ್ನೆಸ್ನಲ್ಲಿ ಇರಬಹುದಾದ ಒಳಿತು-ಕೆಡುಕುಗಳ ಬಗ್ಗೆ ಈ ಸಿನಿಮಾದಲ್ಲಿ ಒಂದು ಚರ್ಚೆ ಇದೆ. ಆದರೆ ಈ ಎಲ್ಲ ವಿಚಾರಗಳನ್ನು ತೆರೆಗೆ ತರುವಲ್ಲಿ ಅನಗತ್ಯವಾಗಿ ಸರ್ಕಸ್ ನಡೆದಂತಿದೆ. ಕೊಲೆ, ಟ್ರ್ಯಾಪ್, ಕಿಡ್ನಾಪ್, ಚೇಸಿಂಗ್ ಮುಂತಾದ ಸನ್ನಿವೇಶಗಳೇ ಇಡೀ ಸಿನಿಮಾದಲ್ಲಿ ತುಂಬಿ ಹೋಗಿವೆ. ಏನು ನಡೆಯುತ್ತಿದೆ ಎಂಬುದೇ ತಿಳಿಯದ ರೀತಿಯಲ್ಲಿ ಮೊದಲಾರ್ಧ ಮೂಡಿಬಂದಿದೆ. ದ್ವಿತೀಯಾರ್ಧದಲ್ಲಿ ಕಹಾನಿ ನಿಧಾನಕ್ಕೆ ತೆರೆದುಕೊಳ್ಳುತ್ತದೆ. ಅಲ್ಲಿಯೂ ಕೂಡ ಅನಗತ್ಯವಾಗಿ ಗೊಂದಲ ಮೂಡಿಸುವ ಕೆಲಸ ಆಗಿದೆ.
ಇದನ್ನೂ ಓದಿ: Pinki Elli Review: ನಾಟಕೀಯ ತಂತ್ರಗಳಿಲ್ಲದೆ ಮಂತ್ರಮುಗ್ಧ ಆಗಿಸುವ ನೈಜ ಸಿನಿಮಾ
‘ಧೂಮಂ’ ಚಿತ್ರದಲ್ಲಿನ ವಿಷಯ ಅಪರೂಪದ್ದು ಮತ್ತು ಅಗತ್ಯವಾದದ್ದು ಎಂಬುದು ನಿಜ. ಆದರೆ ಅದನ್ನು ತೆರೆಗೆ ತಂದಿರುವ ರೀತಿಯಲ್ಲಿ ಯಾವುದೇ ಹೊಸತನ ಕಾಣಿಸದು. ಇರುವ ಸಣ್ಣ ಸಂದೇಶವನ್ನು ತೋರಿಸಲು ಇಡೀ ಸಿನಿಮಾದಲ್ಲಿ ಕಸರತ್ತು ನಡೆದಿದೆ. ಪ್ರತಿಭಾವಂತ ಹಾಗೂ ಜನಪ್ರಿಯ ಕಲಾವಿದರು ಇರುವುದರಿಂದ ಈ ಸಿನಿಮಾದ ಮೆರುಗು ಹೆಚ್ಚಿದೆ. ಫಹಾದ್ ಫಾಸಿಲ್ ಅವರು ಎಂದಿನಂತೆ ತಮ್ಮ ಅಭಿನಯದ ಮೂಲಕ ಆವರಿಸಿಕೊಂಡಿದ್ದಾರೆ. ಅಪರ್ಣಾ ಬಾಲಮುರಳಿ, ರೋಶನ್ ಮ್ಯಾಥ್ಯೂ ಕೂಡ ಇಷ್ಟವಾಗುತ್ತಾರೆ. ದ್ವಿತೀಯಾರ್ಧದ ಕೆಲವೇ ದೃಶ್ಯಗಳಲ್ಲಿ ಕನ್ನಡದ ನಟ ಅಚ್ಯುತ್ ಕುಮಾರ್ ಸೀಮಿತ ಆಗಿದ್ದಾರೆ. ಧರ್ಮಣ್ಣ ಕೂಡ ಹೀಗೆ ಬಂದು ಹಾಗೆ ಮಾಯವಾಗುತ್ತಾರೆ. ತಾಂತ್ರಿಕವಾಗಿ ಸಿನಿಮಾ ಅಚ್ಚುಕಟ್ಟಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.