ಚಿತ್ರ: ಕೌಸಲ್ಯ ಸುಪ್ರಜಾ ರಾಮ
ನಿರ್ಮಾಣ: ಕೌರವ ಪ್ರೊಡಕ್ಷನ್ ಹೌಸ್, ಶಶಾಂಕ್ ಸಿನಿಮಾಸ್
ನಿರ್ದೇಶನ: ಶಶಾಂಕ್
ಪಾತ್ರವರ್ಗ: ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಬೃಂದಾ ಆಚಾರ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ, ಅಚ್ಯುತ್ ಕುಮಾರ್ ಮುಂತಾದವರು.
ಸ್ಟಾರ್: 3.5/5
ಡಾರ್ಲಿಂಗ್ ಕೃಷ್ಣ ಅವರನ್ನು ಫ್ಯಾಮಿಲಿ ಪ್ರೇಕ್ಷಕರು ಇಷ್ಟಪಡುತ್ತಾರೆ. ಅದೇ ರೀತಿ ನಿರ್ದೇಶಕ ಶಶಾಂಕ್ ಕೂಡ ಕೌಟುಂಬಿಕ ಪ್ರೇಕ್ಷಕರನ್ನು ಸೆಳೆಯುವಂತಹ ಸಿನಿಮಾ ಮಾಡುತ್ತಾರೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಪಕ್ಕಾ ಫ್ಯಾಮಿಲಿ ಆಡಿಯನ್ಸ್ಗೆ ಇಷ್ಟ ಆಗುವಂತಿದೆ. ಈ ಚಿತ್ರದ ಮೂಲಕ ಒಂದೊಳ್ಳೆಯ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಂದೇ ಸಿನಿಮಾದಲ್ಲಿ ಇದ್ದರೆ ಅವರ ಅಭಿಮಾನಿಗಳಿಗೆ ಖುಷಿ ಆಗುತ್ತದೆ. ಆ ದೃಷ್ಟಿಯಿಂದಲೂ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ವಿಶೇಷವಾಗಿದೆ. ನಾಯಕಿ ಬೃಂದಾ ಆಚಾರ್ಯ ಕೂಡ ಈ ಸಿನಿಮಾದಲ್ಲಿ ಗಮನ ಸೆಳೆಯುತ್ತಾರೆ. ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್ ಅವರಂತಹ ಅನುಭವ ಕಲಾವಿದರಿಂದಾಗಿ ಚಿತ್ರದ ಮೆರುಗು ಹೆಚ್ಚಿದೆ.
ಹೆಣ್ಮಕ್ಕಳ ಮುಂದೆ ತಲೆ ಬಾಗಬಾರದು ಎಂಬ ಹಠ ಹೊಂದಿರುವ ರಾಮ್ (ಡಾರ್ಲಿಂಗ್ ಕೃಷ್ಣ) ಅಲಿಯಾಸ್ ರಾಮೇಗೌಡನ ಕಥೆ ಇದು. ತಾನು ಗಂಡಸು ಎಂಬ ಪೊಗರು ಆತನ ಮೈಯೆಲ್ಲಾ ತುಂಬಿಕೊಂಡಿರುತ್ತದೆ. ಅಂಥವನ ಬಾಳಲ್ಲಿ ಶಿವಾನಿ (ಬೃಂದಾ ಆಚಾರ್ಯ) ಎಂಬ ಸುಂದರಿ ಎಂಟ್ರಿ ನೀಡುತ್ತಾಳೆ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆದರೆ ಗಂಡಸುತನದ ಅಂಹಕಾರದಿಂದ ರಾಮ್‌ನ ಜೀವನದಲ್ಲಿ ಆ ಪ್ರೀತಿ ಉಳಿಯುವುದಿಲ್ಲ. ಆಗ ಅವನ ಜೀವನದಲ್ಲಿ ಬಿರುಗಾಳಿಯಂತೆ ಎಂಟ್ರಿ ಕೊಡುವವಳು ಮುತ್ತುಲಕ್ಷ್ಮಿ (ಮಿಲನಾ ನಾಗರಾಜ್). ಕಥೆಯ ಕೊನೆಯಲ್ಲಿ ರಾಮ್ ನಿಜವಾದ ಗಂಡಸು ಹೌದೋ ಅಲ್ಲವೋ ಎಂಬುದು ಗೊತ್ತಾಗುತ್ತದೆ. ಅದೇ ಈ ಸಿನಿಮಾದ ತಿರುಳು. ನಿಜವಾದ ಗಂಡಸು ಎಂದರೆ ಯಾರು ಎಂಬ ವ್ಯಾಖ್ಯಾನವೂ ಈ ಸಿನಿಮಾದಲ್ಲಿದೆ.
ಒಂದು ಕುಟುಂಬ ನಡೆಯಬೇಕು ಅಂದರೆ ಗಂಡ ಮತ್ತು ಹೆಂಡತಿಯ ಪಾತ್ರ ಬಹಳ ಮುಖ್ಯ. ಇಬ್ಬರಿಗೂ ಜವಾಬ್ದಾರಿ ಇರುತ್ತದೆ. ಆದರೆ ಗಂಡು ತಾನೇ ಮೇಲು ಎಂದು ಗರ್ವ ತೋರಿಸಿದಾಗ ಸಮಸ್ಯೆಗಳು ಉದ್ಭವ ಆಗುತ್ತವೆ. ಅದರಿಂದ ಎಷ್ಟೋ ಹೆಣ್ಣುಮಕ್ಕಳ ಬಾಳು ಹಾಳಾಗಿದೆ. ಇಂಥ ಸೀರಿಯಸ್ ವಿಷಯವನ್ನು ಬಹಳ ಲವಲವಿಕೆಯಿಂದ ಹಾಸ್ಯದ ಮೂಲಕ ವಿವರಿಸಿದ್ದಾರೆ ನಿರ್ದೇಶಕ ಶಶಾಂಕ್. ವಯಸ್ಸಿನ ಮಿತಿ ಇಲ್ಲದೇ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ನೋಡುವಂತಹ ಸಿನಿಮಾ ಇದಾಗಿದೆ. ಗಂಡು ಕುಲಕ್ಕೆ ದೊಡ್ಡ ಮೆಸೇಜ್ ನೀಡಲಾಗಿದೆ. ಪ್ರೇಕ್ಷಕರಿಗೆ ಆ ಸಂದೇಶವನ್ನು ಮನವರಿಕೆ ಮಾಡಿಸುವ ರೀತಿಯಲ್ಲಿ ಇಡೀ ಸಿನಿಮಾ ಮೂಡಿಬಂದಿದೆ.
ಕಥಾನಾಯಕನ ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಆ ಪಾತ್ರಕ್ಕೆ ಕಥೆಯಲ್ಲಿ ತುಂಬ ಮಹತ್ವ ಇದೆ. ಅಂಥ ತೂಕದ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಧಾ ಬೆಳವಾಡಿ ಅವರ ಅಭಿನಯ ಕೂಡ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಎರಡು ಶೇಡ್‌ನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರ ನಟನೆ ಗಮನಾರ್ಹವಾಗಿದೆ. ಮಿಲನಾ ನಾಗರಾಜ್ ತುಂಬ ಬೋಲ್ಡ್ ಆದಂತಹ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಕಾಂಬಿನೇಷನ್ ತುಂಬಾ ಭಿನ್ನವಾಗಿದೆ. ಬೃಂದಾ ಆಚಾರ್ಯ ಅವರ ಅಭಿನಯಕ್ಕೂ ಚಪ್ಪಾಳೆ ಸಲ್ಲಲೇಬೇಕು. ಅದೇ ರೀತಿ ನಾಗಭೂಷಣ ಕೂಡ ಹೆಚ್ಚು ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದ್ದಾರೆ. ಕಾಣಿಸಿಕೊಳ್ಳುವ ಪ್ರತಿ ದೃಶ್ಯದಲ್ಲೂ ಕೂಡ ಅವರು ಭರ್ಜರಿಯಾಗಿ ನಗಿಸುತ್ತಾರೆ.
ಇದನ್ನೂ ಓದಿ: Achar And Co Review: ಮೆಟ್ರೋ ಕಾಲಕ್ಕೂ ಅನ್ವಯ ಆಗುವ ರೆಟ್ರೋ ಕಥೆಯ ಸಿನಿಮಾ ‘ಆಚಾರ್ ಆ್ಯಂಡ್ ಕೋ’
ಶಶಾಂಕ್ ಅವರ ಸಿನಿಮಾಗಳಲ್ಲಿ ಹಾಡಿಗೆ ತುಂಬಾ ಮಹತ್ವ ಇರುತ್ತದೆ. ಅದು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲೂ ಮುಂದುವರಿದಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈ ಚಿತ್ರಕ್ಕೆ ಮೆರುಗು ನೀಡಿವೆ. ಮೆಲೋಡ್ರಾಮ ಹೆಚ್ಚಿಸುವಂತಹ ಹಿನ್ನೆಲೆ ಸಂಗೀತ ಈ ಸಿನಿಮಾದಲ್ಲಿದೆ.
ಸುಜ್ಞಾನ್ ಅವರ ಛಾಯಾಗ್ರಹಣದಲ್ಲಿ ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಅರ್ಥಪೂರ್ಣವಾದ ಡೈಲಾಗ್‌ಗಳ ಮೂಲಕ ನಿರ್ದೇಶಕ ಶಶಾಂಕ್ ಅವರು ಪುರುಷ ಪ್ರಧಾನ ವ್ಯವಸ್ಥೆಗೆ ಪಂಚ್ ನೀಡಿದ್ದಾರೆ.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ತೋರಿಸಿರುವುದು ಯಾವುದೋ ಎರಡು ಕುಟುಂಬದ ಕಟ್ಟುಕಥೆ ಅಲ್ಲ. ಸಮಾಜದಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಇಂಥದ್ದೇ ವಾತಾವರಣ ಇದೆ. ಗಂಡಸು, ಗಂಡಸುತನ ಎಂಬಿತ್ಯಾದಿ ಕಲ್ಪನೆಗಳ ಹಿಂದಿರುವ ಭ್ರಮೆಯನ್ನು ತೊಡೆದು ಹಾಕುವಲ್ಲಿ ಈ ಸಿನಿಮಾ ಮುಖ್ಯವಾಗುತ್ತದೆ. ಎಷ್ಟೋ ಶತಮಾನಗಳಿಂದಲೂ ದಾರಿತಪ್ಪಿರುವ ಗಂಡಸು ಜಾತಿಯು ಸರಿದಾರಿಗೆ ಬರಲು ಏನೆಲ್ಲ ಮಾಡಬಹುದು ಎಂಬುದನ್ನು ತಿಳಿಸುವ ಕೈಪಿಡಿಯ ರೀತಿಯಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಮೂಡಿ ಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:23 am, Fri, 28 July 23