ಯಾರಿದು ಜೆ ರಾಬರ್ಟ್ ಆಪನ್​ಹೈಮರ್? ಇವರ ಬಗ್ಗೆ ಸಿನಿಮಾ ಯಾಕೆ?

|

Updated on: Jul 18, 2023 | 9:53 PM

Oppenheimer: ಯಾರಿದು ವಿಜ್ಞಾನಿ ಜೆ ರಾಬರ್ಟ್ ಆಪನ್​ಹೈಮರ್? ಈತನ ಬಗ್ಗೆ ಸಿನಿಮಾ ಮಾಡಿರುವುದೇಕೆ? ವಿಶ್ವವೇ ಸಿನಿಮಾ ನೋಡಲು ಕಾಯುತ್ತಿರುವುದೇಕೆ?

ಯಾರಿದು ಜೆ ರಾಬರ್ಟ್ ಆಪನ್​ಹೈಮರ್? ಇವರ ಬಗ್ಗೆ ಸಿನಿಮಾ ಯಾಕೆ?
ರಾಬರ್ಟ್ ಆಪನ್​ಹೈಮರ್
Follow us on

ರಾಜರ ಕಾಲದಲ್ಲಿ ಯಾರ ಬಳಿ ಹೆಚ್ಚು ಆನೆ, ಕುದುರೆ ಸೈನಿಕರು ಇರುತ್ತಾರೆಯೋ ಆ ರಾಜ್ಯ ಬಲಾಢ್ಯ ಎನಿಸಿಕೊಳ್ಳುತ್ತಿತ್ತು, ಆಧುನಿಕ ಯುಗದಲ್ಲಿ ಯಾರ ಬಳಿ ಹೆಚ್ಚು ಮದ್ದು, ಗುಂಡುಗಳು ಇರುತ್ತವೆಯೋ ಅದರಲ್ಲಿಯೂ ಸುಧಾರಿತ ಶಸ್ತ್ರಾಸ್ತ್ರಗಳನ್ನು ಯಾವ ದೇಶ ಹೊಂದಿರುತ್ತದೆಯೋ ಅದು ಬಲಾಢ್ಯ ಎನಿಸಿಕೊಳ್ಳುತ್ತದೆ. ಮಷಿನ್ ಗನ್, ರೇಡಿಯೋ ತಂತ್ರಜ್ಞಾನ, ಅತ್ಯಾಧುನಿಕ ಟ್ಯಾಂಕ್​ಗಳನ್ನು ಹೊಂದಿದ್ದ ಹಿಟ್ಲರ್ ಜರ್ಮನಿಯನ್ನು ಬಲಾಢ್ಯ ದೇಶವನ್ನಾಗಿಸಿದ್ದ ಎರಡನೇ ವಿಶ್ವಯುದ್ಧದ ಸಮಯದಲ್ಲಿ. ಆದರೆ ಜರ್ಮನಿಗಿದ್ದ ಆ (ಕು)ಖ್ಯಾತಿಯನ್ನು ಅಮೆರಿಕ ಕೇವಲ ಒಂದು ಬಾಂಬ್​ನಿಂದ ಕಿತ್ತುಕೊಂಡಿತು ಅದುವೇ ಅಣುಬಾಂಬ್. ಅಮೆರಿಕ, ಎರಡನೇ ವಿಶ್ವಯುದ್ಧದಲ್ಲಿ ಹಿರೊಷಿಮಾ ಹಾಗೂ ನಾಗಸಾಕಿ ಮೇಲೆ ಅಣುಬಾಂಬ್ ಪ್ರಯೋಗಿಸಿದ ಬಳಿಕ ವಿಶ್ವದ ರಾಜಕೀಯವೇ ಬದಲಾಗಿಹೋಯ್ತು. ಪರಮಾಣು ಹೊಂದಿದ ದೇಶಗಳು ಬಲಿಷ್ಠ ಎನಿಸಿಕೊಳ್ಳಲಾರಂಭಿಸಿದವು, ಪರಮಾಣು ಬಾಂಬಿನ ಸುತ್ತ ಪ್ರತ್ಯೇಕ ರಾಜಕೀಯ ಲೆಕ್ಕಾಚಾರ ಹುಟ್ಟಿಕೊಂಡಿತು. ಇದಕ್ಕೆ ಕಾರಣವಾಗಿದ್ದು ವಿನಾಶಕಾರಿ ಅಟಾಮಿಕ್ ಬಾಂಬ್ ಜನಕ ವಿಜ್ಞಾನಿ ಜೆ ರಾಬರ್ಟ್ ಆಪನ್​ಹೈಮರ್ (Robert Oppenheimer).

ವಿವಾದಾತ್ಮಕ ಜೀವನ ಸಾಗಿಸಿದ ಈ ಪ್ರತಿಭಾನ್ವಿತ ವಿಜ್ಞಾನಿಯ ಕುರಿತು ಇದೀಗ ಸಿನಿಮಾ ಆಗಿದ್ದು, ವಿಶ್ವವೇ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದೆ. ವಿಶ್ವ ಶ್ರೇಷ್ಠ ಸಿನಿಮಾ ನಿರ್ದೇಶಕ ಕ್ರಿಸ್ಟೊಫರ್ ನೋಲನ್ (Christopher Nolan), ವಿಜ್ಞಾನಿ ರಾಬರ್ಟ್ ಆಪನ್​ಹೈಮರ್ ಕುರಿತಾಗಿ ಸಿನಿಮಾ ಮಾಡಿದ್ದಾರೆ. ಸಿನಿಮಾಕ್ಕೆ ‘ಆಪನ್​ಹೈಮರ್’ ಎಂದೇ ಹೆಸರಿಡಲಾಗಿದೆ. ಈ ಹಿಂದೆ ‘ಬ್ಯಾಟ್​ಮ್ಯಾನ್’ ರೀತಿಯ ಸೂಪರ್ ಹೀರೋ, ‘ಇನ್​ಸೆಪ್ಷನ್’, ‘ಇಂಟರ್​ಸ್ಟೆಲ್ಲರ್’, ‘ಟೆನೆಟ್’ ರೀತಿಯ ಸೈಂಟಿಫಿಕ್ ಥ್ರಿಲ್ಲರ್​ಗಳನ್ನು ನಿರ್ದೇಶಿಸಿದ್ದ ಕ್ರಿಸ್ಟೊಫರ್ ಮೊದಲ ಬಾರಿಗೆ ನಿಜ ವ್ಯಕ್ತಿಯೊಬ್ಬರ ಕತೆಯನ್ನು ಹೇಳಿದ್ದು, ಇಡೀ ವಿಶ್ವವೇ ಸಿನಿಮಾ ನೋಡಲು ಕಾತರವಾಗಿದೆ.

ಹಿರೋಷಿಮಾ, ನಾಗಸಾಕಿ ದಾಳಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಹತರಾದರು, ಬಾಂಬಿನ ಪರಿಣಾಮಗಳು ತೀರ ಇತ್ತೀಚಿನವರೆಗೂ ಅಲ್ಲಿಯ ಜನರನ್ನು ಕಾಡಿತ್ತು. ವಿಶ್ವದ ಅತಿದೊಡ್ಡ ಮಾರಣಹೋಮಕ್ಕೆ ಕಾರಣವಾದ ವ್ಯಕ್ತಿಯ ಬಗ್ಗೆ ಸಿನಿಮಾ ಏಕೆ? ಅಲ್ಲದೆ, ಸ್ವತಃ ಅಮೆರಿಕದಲ್ಲಿ ಸಹ ವಿಜ್ಞಾನಿ ರಾಬರ್ಟ್ ಆಪನ್​ಹೈಮರ್ ಬಗ್ಗೆ ದ್ವಂದ್ವ ಅಭಿಪ್ರಾಯಗಳಿವೆ. ಆತನನ್ನು ಗೂಢಚಾರಿ, ದೇಶದ್ರೋಹಿ ಎನ್ನುವ ವರ್ಗವಿದೆ. ಆತನನ್ನು ಸಾವಿನ ವ್ಯಾಪಾರಿ ಎಂದು ಜರಿಯಲಾಗುತ್ತದೆ. ಆದರೆ ಇನ್ನು ಕೆಲವರಿಗೆ ಆತ ರಾಷ್ಟ್ರದ ಹೀರೋ!

ಇದನ್ನೂ ಓದಿ:Oppenheimer: ಕ್ರಿಸ್ಟೋಫರ್ ನೋಲನ್​ ನಿರ್ದೇಶನದ ‘ಆಪನ್​ಹೈಮರ್​’ ಸಿನಿಮಾ ಮೇಲೆ ಇಷ್ಟೊಂದು ಕ್ರೇಜ್​ ಹೆಚ್ಚಲು ಕಾರಣ ಏನು? ಇಲ್ಲಿದೆ ವಿವರ..

ಸಾಮಾನ್ಯ ವಿಷಯಗಳನ್ನು ಸಿನಿಮಾಕ್ಕೆ ಆಯ್ದುಕೊಳ್ಳದ ಕ್ರಿಸ್ಟೊಫರ್ ನೋಲನ್, ಆಪನ್​ಹೈಮರ್ ಜೀವನವನ್ನು ಸಿನಿಮಾ ಮಾಡಲು ಮುಂದಾಗಿರುವುದೇ ಅವರ ವ್ಯಕ್ತಿತ್ವದ ಬಗ್ಗೆ ಅವರ ಬಗ್ಗೆ ಇರುವ ಭಿನ್ನಾಭಿಪ್ರಾಯಗಳು, ಆರೋಪಗಳು, ಹೊಗಳಿಕೆಗಳ ಕಾರಣಕ್ಕೆ. ಅದೂ ಅಲ್ಲದೆ ವಿಶ್ವದ ಭವಿಷ್ಯವವನ್ನೇ ಬದಲಿಸಿದ ಆಟೊಮಿಕ್ ಬಾಂಬ್ ತಯಾರಿ ಹಾಗೂ ಅದರ ಪ್ರಥಮ ಪ್ರಯೋಗ ಹಾಗೂ ಆ ಕಾರ್ಯದಲ್ಲಿ ನಿರತರಾಗಿದ್ದವರ ಮಾನಸಿಕತೆಯನ್ನು ಹಿಡಿದಿಡುವ ಪ್ರಯತ್ನವನ್ನು ಕ್ರಿಸ್ಟೊಫರ್ ‘ಆಪನ್​ಹೈಮರ್’ ಸಿನಿಮಾದಲ್ಲಿ ಮಾಡಿದ್ದಾರೆ.

‘ಆಪನ್​ಹೈಮರ್’ ಅನ್ನೂ ಬಹು ಅದ್ಧೂರಿಯಾಗಿ ಕ್ರಿಸ್ಟೊಫರ್ ನೋಲನ್ ತೆರೆಗೆ ತಂದಿದ್ದಾರೆ ಎನ್ನಲಾಗುತ್ತಿದೆ. ವಿಶೇಷ ಐಮ್ಯಾಕ್ಸ್ ಫಿಲಂ ರೀಲ್​ಗಳನ್ನು ಅಭಿವೃದ್ಧಿಪಡಿಸಿ ಅತ್ಯಂತ ಗುಣಮಟ್ಟದ ದೃಶ್ಯಗಳನ್ನು ಈ ಸಿನಿಮಾಕ್ಕಾಗಿ ನೋಲನ್ ಸೆರೆ ಹಿಡಿದಿದ್ದಾರೆ. ಅದೂ ಅಲ್ಲದೆ, ಅಟೊಮಿಕ್ ಬಾಂಬ್​ ಪ್ರಯೋಗದಂಥಹಾ ದೃಶ್ಯಗಳನ್ನು ಸಹ ಸಿಜಿಐ, ವಿಎಫ್​ಎಕ್ಸ್ ಸಹಾಯವಿಲ್ಲದೆ ನಿಜವಾಗಿಯೇ ಬಾಂಬ್ ಸ್ಪೋಟಿಸಿ ಚಿತ್ರೀಕರಿಸಿದ್ದಾರೆ. ‘ಆಪನ್​ಹೈಮರ್’ ಸಿನಿಮಾ ಜುಲೈ 21 ಕ್ಕೆ ಭಾರತ ಸೇರಿದಂತೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ