Oppenheimer: ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಓದುವ ದೃಶ್ಯ; ‘ಆಪನ್ಹೈಮರ್’ ಚಿತ್ರಕ್ಕೆ ಎದುರಾಯ್ತು ವಿರೋಧ
Bhagavad Gita in Oppenheimer Movie: ‘ಆಪನ್ಹೈಮರ್’ ಸಿನಿಮಾದಲ್ಲಿನ ಈ ದೃಶ್ಯಕ್ಕೆ ಭಾರತದ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದರು ಎಂದು ಕೆಲವರು ತಕರಾರು ತೆಗೆದಿದ್ದಾರೆ. ಆಕ್ಷೇಪಾರ್ಹ ದೃಶ್ಯವನ್ನು ತೆಗೆದುಹಾಕುವಂತೆ ಒತ್ತಾಯಿಸಲಾಗುತ್ತಿದೆ.
ಎಲ್ಲೆಲ್ಲೂ ‘ಆಪನ್ಹೈಮರ್’ ಸಿನಿಮಾದ (Oppenheimer Movie) ಬಗ್ಗೆ ಚರ್ಚೆ ಆಗುತ್ತಿದೆ. ಜುಲೈ 21ರಂದು ಬಿಡುಗಡೆ ಆದ ಹಾಲಿವುಡ್ನ ಈ ಚಿತ್ರಕ್ಕೆ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿನ ಒಂದು ದೃಶ್ಯಕ್ಕೆ ಈಗ ವಿರೋಧ ವ್ಯಕ್ತವಾಗಿದೆ. ಲೈಂಗಿಕ ಕ್ರಿಯೆ ನಡೆಸುವಾಗ ಕಥಾನಾಯಕ ಭಗವದ್ಗೀತೆಯ (Bhagavad Gita) ಸಾಲುಗಳನ್ನು ಓದುವ ದೃಶ್ಯ ಈ ಸಿನಿಮಾದಲ್ಲಿದೆ. ಇದಕ್ಕೆ ಭಾರತದಲ್ಲಿ ಆಕ್ಷೇಪ ಎದುರಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ತಕರಾರು ತೆಗೆದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ‘ಆಪನ್ಹೈಮರ್’ ಚಿತ್ರತಂಡವನ್ನು ಪ್ರಶ್ನಿಸಿದ್ದಾರೆ. ಈ ದೃಶ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನದ ಈ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಅಣುಬಾಂಬ್ ಕಂಡು ಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್ಹೈಮರ್ ಅವರ ಜೀವನದ ಕುರಿತು ‘ಆಪನ್ಹೈಮರ್’ ಸಿನಿಮಾ ಮೂಡಿಬಂದಿದೆ. ಆಪನ್ಹೈಮರ್ ಪಾತ್ರವನ್ನು ಕಿಲಿಯನ್ ಮರ್ಫಿ ಮಾಡಿದ್ದಾರೆ. ರಿಯಲ್ ಲೈಫ್ನಲ್ಲಿ ಆಪನ್ಹೈಮರ್ ಅವರಿಗೆ ಹಿಂದೂ ಪುರಾಣಗಳ ಬಗ್ಗೆ ಆಸಕ್ತಿ ಇತ್ತು. ಅವರು ಸಂಸ್ಕೃತ ಕಲಿತಿದ್ದರು ಮತ್ತು ಭಗವದ್ಗೀತೆ ಓದಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಈ ಸಿನಿಮಾದಲ್ಲಿ ಒಂದು ದೃಶ್ಯ ಇದೆ. ಆ ದೃಶ್ಯವೇ ಈಗ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ.
. @OppenheimerATOM To, Mr Christopher Nolan Director , Oppenheimer film
Date : July 22, 2023
Reg: Film Oppenheimer’s disturbing attack on Hinduism
Dear Mr Christopher Nolan,
Namaste from Save Culture Save India Foundation.
It has come to our notice that the movie…
— Uday Mahurkar (@UdayMahurkar) July 22, 2023
ಆಪನ್ಹೈಮರ್ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಅವರ ಪ್ರೇಯಸಿಗೆ ಅನೇಕ ಪುಸ್ತಕಗಳು ಕಾಣಿಸುತ್ತವೆ. ಆ ಪೈಕಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡು ‘ಇದು ಏನು’ ಅಂತ ಆಕೆ ಪ್ರಶ್ನಿಸುತ್ತಾಳೆ. ‘ಇದು ಭಗವದ್ಗೀತೆ’ ಎಂದು ಆಪನ್ಹೈಮರ್ ಹೇಳುತ್ತಾರೆ ಮತ್ತು ಅದರಲ್ಲಿನ ಒಂದೆರಡು ಸಾಲುಗಳನ್ನು ವಿವರಿಸುತ್ತಾರೆ. ಇಂಥ ದೃಶ್ಯಕ್ಕೆ ಭಾರತದಲ್ಲಿ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದರು ಎಂದು ಕೆಲವರು ತಕರಾರು ತೆಗೆದಿದ್ದಾರೆ. ಇದು ಹಿಂದೂ ಧರ್ಮದ ಮೇಲೆ ಮಾಡಲಾಗಿರುವ ದಾಳಿ ಎಂದು ಟೀಕೆ ವ್ಯಕ್ತವಾಗುತ್ತಿದೆ.
‘ಸೇವ್ ಕಲ್ಚರ್ ಸೇವ್ ಇಂಡಿಯಾ ಪ್ರತಿಷ್ಠಾನ’ದ ವತಿಯಿಂದ ಉದಯ್ ಮಹುರ್ಕರ್ ಅವರು ‘ಆಪನ್ಹೈಮರ್’ ಸಿನಿಮಾದ ನಿರ್ದೇಶಕ ಕ್ರಿಸ್ಟೋಫರ್ ನೋಲನ್ಗೆ ಪತ್ರ ಬರೆದಿದ್ದಾರೆ. ಸಿನಿಮಾದಲ್ಲಿ ಇರುವ ಆಕ್ಷೇಪಾರ್ಹ ದೃಶ್ಯವನ್ನು ತೆಗೆದುಹಾಕುವಂತೆ ಅವರು ಒತ್ತಾಯಿಸಿದ್ದಾರೆ. ಇದಕ್ಕೆ ಕ್ರಿಸ್ಟೋಫರ್ ನೋಲನ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಮೂಡಿದೆ. ಹಾಲಿವುಡ್ನಲ್ಲಿ ಗಮನಾರ್ಹ ಸಿನಿಮಾಗಳನ್ನು ಮಾಡಿ ಕ್ರಿಸ್ಟೋಫರ್ ನೋಲನ್ ಅವರು ಗುರುತಿಸಿಕೊಂಡಿದ್ದಾರೆ. ಭಾರತದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಪ್ರಸ್ತುತ ರಿಲೀಸ್ ಆಗಿರುವ ‘ಆಪನ್ಹೈಮರ್’ ಸಿನಿಮಾಗೆ ಭಾರತದ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 13.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.