Ram Gopal Varma: ‘ಆಪನ್ಹೈಮರ್’ ಚಿತ್ರದಲ್ಲಿನ ಭಗವದ್ಗೀತೆ ಕುರಿತ ವಿವಾದಾತ್ಮಕ ದೃಶ್ಯದ ಬಗ್ಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ
Oppenheimer Movie: ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಬಗ್ಗೆ ನೆಟ್ಟಿಗರು ಪರ-ವಿರೋಧ ಚರ್ಚೆ ಮಾಡಿದ್ದಾರೆ. ಆರ್ಜಿವಿ ಅಭಿಪ್ರಾಯವನ್ನು ಕೆಲವರು ಬೆಂಬಲಿಸಿದ್ದಾರೆ. ಇನ್ನೊಂದು ವರ್ಗದವರು ಟೀಕಿಸಿದ್ದಾರೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಹಲವು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಅವರ ಮಾತುಗಳಿಂದ ಅನೇಕ ಬಾರಿ ವಿವಾದಗಳು ಆಗಿದ್ದುಂಟು. ಇತ್ತೀಚೆಗೆ ಬಹುತೇಕರು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹಾಗಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ರಾಮ್ ಗೋಪಾಲ್ ವರ್ಮಾ ಮಾಡುವ ಪೋಸ್ಟ್ಗಳು ವೈರಲ್ ಆಗುತ್ತವೆ. ಈಗ ಅವರು ‘ಆಪನ್ಹೈಮರ್’ (Oppenheimer) ಸಿನಿಮಾದಲ್ಲಿನ ಒಂದು ವಿವಾದಾತ್ಮಕ ದೃಶ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಈ ಸಿನಿಮಾ ಭಾರತದಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಆದರೆ ಈ ಚಿತ್ರದಲ್ಲಿ ಭಗವದ್ಗೀತೆಗೆ (Bhagavad Gita) ಅವಮಾನ ಆಗುವಂತಹ ದೃಶ್ಯ ಇದೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಆ ಬಗ್ಗೆ ರಾಮ್ ಗೋಪಾಲ್ ವರ್ಮಾ ತಮ್ಮ ಅನಿಸಿಕೆ ತಿಳಿಸಿದ್ದಾರೆ.
ವಿವಾದ ಏನು?
ಅಣುಬಾಂಬ್ ಕಂಡುಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್ಹೈಮರ್ ಅವರ ಜೀವನದ ಕುರಿತು ‘ಆಪನ್ಹೈಮರ್’ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ಒಂದು ದೃಶ್ಯ ಇದೆ. ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಆಪನ್ಹೈಮರ್ ಅವರ ಪ್ರೇಯಸಿಗೆ ಹಲವು ಪುಸ್ತಕಗಳು ಕಾಣಿಸುತ್ತವೆ. ಅವುಗಳಲ್ಲಿ ಒಂದು ಪುಸ್ತಕವನ್ನು ಹಿಡಿದುಕೊಂಡು ‘ಇದು ಏನು’ ಎಂದು ಆಕೆ ಪ್ರಶ್ನಿಸುತ್ತಾಳೆ. ‘ಇದು ಭಗವದ್ಗೀತೆ’ ಅಂತ ಆಪನ್ಹೈಮರ್ ಉತ್ತರಿಸುತ್ತಾರೆ ಹಾಗೂ ಅದರಲ್ಲಿ ಇರುವ ಕೆಲವು ಸಾಲುಗಳನ್ನು ವಿವರಿಸಿ ಹೇಳುತ್ತಾರೆ. ಈ ದೃಶ್ಯಕ್ಕೆ ಭಾರತದ ಸೆನ್ಸಾರ್ ಮಂಡಳಿ ಸದಸ್ಯರು ಹೇಗೆ ಅನುಮತಿ ಕೊಟ್ಟರು ಎಂದು ಅನೇಕರು ಕ್ಯಾತೆ ತೆಗೆದಿದ್ದಾರೆ.
ಇದನ್ನೂ ಓದಿ: ಮೂರೇ ದಿನಕ್ಕೆ ಭಾರತದಲ್ಲಿ 50 ಕೋಟಿ ರೂಪಾಯಿ ಕಮಾಯಿ ಮಾಡಿದ ‘ಆಪನ್ಹೈಮರ್’; ‘ಬಾರ್ಬಿ’ ಕಥೆ ಏನು?
ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?
‘ಆಪನ್ಹೈಮರ್’ ಸಿನಿಮಾದಲ್ಲಿ ಭಗವದ್ಗೀತೆಗೆ ಅವಮಾನ ಆಗಿದೆ ಎಂದು ಕೆಲವರು ಹೇಳಿರುವುದಕ್ಕೆ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಅಮರಿಕದ ನ್ಯೂಕ್ಲಿಯರ್ ವಿಜ್ಞಾನಿ ಆಪನ್ಹೈಮರ್ ಅವರು ಭಗವದ್ಗೀತೆ ಓದಿದ್ದರು. ವಿಪರ್ಯಾಸ ಏನೆಂದರೆ, ಭಾರತದ ಶೇಕಡ 0.0000001ರಷ್ಟು ಮಂದಿ ಕೂಡ ಭಗವದ್ಗೀತೆ ಓದಿದ್ದಾರೆ ಎಂಬ ಬಗ್ಗೆ ನನಗೆ ಅನುಮಾನ ಇದೆ’ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
Irony is that an American nuclear scientist Oppenheimer read the BhagwadGeeta which I doubt even 0.0000001 % of Indians read
— Ram Gopal Varma (@RGVzoomin) July 24, 2023
ನೆಟ್ಟಿಗರ ಪರ-ವಿರೋಧ:
ರಾಮ್ ಗೋಪಾಲ್ ವರ್ಮಾ ಅವರ ಈ ಟ್ವೀಟ್ ಬಗ್ಗೆ ನೆಟ್ಟಿಗರು ಪರ-ವಿರೋಧ ಚರ್ಚೆ ಮಾಡಿದ್ದಾರೆ. ಕೆಲವರು ರಾಮ್ ಗೋಪಾಲ್ ವರ್ಮಾ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ‘ನಾವು ನೇರವಾಗಿ ಓದಿ ತಿಳಿದುಕೊಳ್ಳುವ ಬದಲು ಬೇರೆಯವರು ತಮಗೆ ಬೇಕಾದಂತೆ ಅರ್ಥೈಸಿ ಬರೆದ ಭಗವದ್ಗೀತೆಯನ್ನು ಓದಿದ್ದೇನೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಂದು ವರ್ಗದ ಜನರು ರಾಮ್ ಗೋಪಾಲ್ ವರ್ಮಾರ ಹೇಳಿಕೆಯನ್ನು ವಿರೋಧಿಸಿದ್ದಾರೆ. ‘ಭಾರತದ ಹಲವರು ಬೈಬಲ್ ಓದಿದ್ದಾರೆ. ಆದರೆ ಅಮೆರಿಕದ ಶೇಕಡ 0.0000001ರಷ್ಟು ಜನರು ಬೈಬಲ್ ಓದುವ ಧೈರ್ಯ ತೋರಿಸಿಲ್ಲ’ ಎಂಬ ಕಮೆಂಟ್ ಕೂಡ ಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.