ಮೊದಲ ದಿನ ‘ಆಪನ್ಹೈಮರ್’ ಸಿನಿಮಾ ಗಳಿಸಿದ್ದೆಷ್ಟು? ‘ಬಾರ್ಬಿ’ ಸಿನಿಮಾ ಕತೆ ಏನಾಯ್ತು?
oppenheimer: ಆಪನ್ಹೈಮರ್ ಸಿನಿಮಾ ಭಾರತದಲ್ಲಿ ಮೊದಲ ದಿನ ಗಳಿಸಿದ್ದೆಷ್ಟು? 'ಬಾರ್ಬಿ' ಸಿನಿಮಾ ಗಳಿಸಿದ್ದೆಷ್ಟು?
ಕ್ರಿಸ್ಟೊಫರ್ ನೋಲನ್ (Christopher Nolan) ನಿರ್ದೇಶನದ ‘ಆಪನ್ಹೈಮರ್’ ಹಾಗೂ ಫ್ಯಾಂಟಸಿ ಸಿನಿಮಾ ‘ಬಾರ್ಬಿ’ ಒಟ್ಟಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಎರಡೂ ಸಿನಿಮಾಗಳ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಅದರಲ್ಲಿಯೂ ‘ಆಪನ್ಹೈಮರ್‘ (oppenheimer) ಸಿನಿಮಾದ ಮೇಲೆ ತುಸು ಹೆಚ್ಚೇ ನಿರೀಕ್ಷೆಯಿತ್ತು. ‘ಆಪನ್ಹೈಮರ್’ ಹಾಗೂ ‘ಬಾರ್ಬಿ’ ಸಿನಿಮಾಗಳೆರಡಕ್ಕೂ ಭಾರತದಲ್ಲಿ ಉತ್ತಮ ಅಡ್ವಾನ್ಸ್ ಬುಕಿಂಗ್ ಆಗಿದ್ದವು. ಇದೀಗ ಮೊದಲ ದಿನದ ಬಾಕ್ಸ್ ಆಫೀಸ್ ವರದಿ ಹೊರಬಂದಿದ್ದು, ‘ಆಪನ್ಹೈಮರ್’ ಹೊಸ ದಾಖಲೆ ಬರೆದಿದೆ.
ನೋಲನ್ ನಿರ್ದೇಶನದ ‘ಆಪನ್ಹೈಮರ್’ ಸಿನಿಮಾ ಈ ವರ್ಷ ಭಾರತದಲ್ಲಿ ಬಿಡುಗಡೆ ಆದ ಹಾಲಿವುಡ್ ಸಿನಿಮಾಗಳನ್ನೆಲ್ಲ ಹಿಂದಿಕ್ಕಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಸಿನಿಮಾ ಆಗಿ ಹೊರಹೊಮ್ಮಿದೆ. ಇದೇ ವರ್ಷ ಬಿಡುಗಡೆ ಆಗಿದ್ದ ‘ಡಾಕ್ಟರ್ ಸ್ಟ್ರೇಂಜ್’, ‘ಆಂಟ್ಮ್ಯಾನ್’, ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’, ‘ಫಾಸ್ಟ್ ಆಂಡ್ ಫ್ಯೂರಿಯಸ್ 10’, ಎರಡು ವಾರಗಳ ಹಿಂದಷ್ಟೆ ಬಿಡುಗಡೆ ಆದ ‘ಮಿಷನ್ ಇಂಪಾಸಿಬಲ್ 7’ ಸಿನಿಮಾಗಳ ದಾಖಲೆಯನ್ನು ‘ಆಪನ್ಹೈಮರ್’ ಸಿನಿಮಾ ಮುರಿದಿದ್ದು ಹೊಸ ದಾಖಲೆ ಬರೆದಿದೆ.
‘ಆಪನ್ಹೈಮರ್’ ಸಿನಿಮಾ ಮೊದಲ ದಿನ 17.80 ಕೋಟಿ ರೂ ಗಳಿಕೆಯನ್ನು ಭಾರತದ ಬಾಕ್ಸ್ ಆಫೀಸ್ನಲ್ಲಿ ಮಾಡಿದೆ. ಈ ವರ್ಷ ಈವರೆಗೆ ಬಿಡಗುಡೆ ಆದ ಇನ್ಯಾವುದೇ ಹಾಲಿವುಡ್ ಸಿನಿಮಾ ಇಷ್ಟು ದೊಡ್ಡ ಮೊತ್ತವನ್ನು ಗಳಿಸಿಲ್ಲ. ಇನ್ನು ‘ಆಪನ್ಹೈಮರ್’ ಸಿನಿಮಾ ಬಿಡುಗಡೆ ಆದ ದಿನವೇ ಬಿಡುಗಡೆ ಆದ ‘ಬಾರ್ಬಿ’ ಸಿನಿಮಾ ಭಾರತದಲ್ಲಿ ಐದು ಕೋಟಿ ರೂಪಾಯಿ ಹಣ ಗಳಿಸಿದೆ. ಇದು ಸಾಮಾನ್ಯ ಮೊತ್ತವೇನೂ ಅಲ್ಲ.
ಇದನ್ನೂ ಓದಿ:Oppenheimer movie Review: ಆಪನ್ಹೈಮರ್, ವಿಜ್ಞಾನಿಯೋ? ವಿಧ್ವಂಸಕನೋ, ದೇಶದ್ರೋಹಿಯೊ, ರಾಜಕಾರಣಿಯೋ?
ಆದರೆ ವಿಶ್ವ ಮಾರುಕಟ್ಟೆಯಲ್ಲಿ ಅದರಲ್ಲಿಯೂ ವಿಶೇಷವಾಗಿ ಅಮೆರಿಕದ ಮಾರುಕಟ್ಟೆಯಲ್ಲಿ ‘ಆಪನ್ಹೈಮರ್’ ಸಿನಿಮಾಕ್ಕಿಂತಲೂ ದುಪ್ಪಟ್ಟು ಹೆಚ್ಚು ಗಳಿಕೆಯನ್ನು ‘ಬಾರ್ಬಿ’ ಸಿನಿಮಾ ಮಾಡಿದೆ ಎನ್ನಲಾಗುತ್ತಿದೆ. ಅಮೆರಿಕದಲ್ಲಿ ‘ಆಪನ್ಹೈಮರ್’ ಸಿನಿಮಾ ಮೊದಲ ದಿನ 90 ಕೋಟಿ ರೂಪಾಯಿ ಗಳಿಸಿದರೆ, ಅದೇ ‘ಬಾರ್ಬಿ’ ಸಿನಿಮಾ 172 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ‘ಆಪನ್ಹೈಮರ್’ ಸಿನಿಮಾ ಕೆಲವು ದೇಶಗಳಲ್ಲಿ ಮಾತ್ರವೇ ಹೆಚ್ಚಿನ ಮೊತ್ತವನ್ನು ಗಳಿಸಿದೆ.
ಅಣುಬಾಂಬ್ನ ಜನಕ ಎಂದೇ ಕರೆಯಲಾಗುವ ಜೆ ರಾಬರ್ಟ್ ಆಪನ್ಹೈಮರ್ ಜೀವನ ಕತೆಯನ್ನು ಕ್ರಿಸ್ಟೊಫರ್ ನೋಲನ್ ‘ಆಪನ್ಹೈಮರ್’ ಸಿನಿಮಾ ಮಾಡಿದ್ದಾರೆ. ವಿಶ್ವದ ಮೊದಲ ಅಣುಬಾಂಬ್ ಪ್ರಯೋಗಕ್ಕೆ ಕಾರಣವಾದ ಮ್ಯಾನ್ಹ್ಯಾಟನ್ ಪ್ರಾಜೆಕ್ಟ್, ಟ್ರಿನಿಟಿ ಟೆಸ್ಟ್ ಹಾಗೂ ಆಪನ್ಹೈಮರ್ ಎದುರಿಸಬೇಕಾಗಿ ಬರುವ ದೇಶದ್ರೋಹ ಪ್ರಕರಣಗಳ ಕುರಿತ ಕತೆಯನ್ನು ಒಳಗೊಂಡಿದೆ. ಇನ್ನು ‘ಬಾರ್ಬಿ’ ಸಿನಿಮಾದಲ್ಲಿ ಜನಪ್ರಿಯ ಗೊಂಬೆ ಬಾರ್ಬಿಯ ಫ್ಯಾಂಟಸಿ ಕತೆಯನ್ನು ಒಳಗೊಂಡಿದ್ದು, ಒಂದೊಮ್ಮೆ ಬಾರ್ಬಿ ತನ್ನ ಬೊಂಬೆಗಳ ಲೋಕದಿಂದ ಭೂಮಿಗೆ ಬಂದರೆ ಏನಾಗಬಹುದು ಎಂಬ ಕತೆಯನ್ನು ಇರಿಸಿಕೊಂಡು ಸಿನಿಮಾ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:27 pm, Sat, 22 July 23