ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಿದ ಮೊದಲ ಸಿನಿಮಾ ಟ್ರೈಲರ್: ಸಿನಿಮಾ ಮೇಕಿಂಗ್ ಅನ್ನು ಬುಡಮೇಲು ಮಾಡಲಿದೆಯೇ ಎಐ?
Artificial Intelligence: ಕೃತಕ ಬುದ್ಧಿಮತ್ತೆ (ಎಐ) ಬಳಸಿ ನಿರ್ಮಿಸಲಾದ ಮೊತ್ತ ಮೊದಲ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ. ಕೇವಲ ಒಬ್ಬ ವ್ಯಕ್ತಿ, ಕೆಲವೇ ಗಂಟೆಗಳಲ್ಲಿ ನಿರ್ಮಿಸಿದ ಈ ಟ್ರೈಲರ್, ನೂರಾರು ಕೋಟಿ ಬಜೆಟ್ ಸಿನಿಮಾಗಳ ಟ್ರೈಲರ್ ಅನ್ನು ಮೀರಿಸುವಂತಿದೆ.
ಕೃತಕ ಬುದ್ಧಿಮತ್ತೆ (artificial intelligence) (ಎಐ-ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಗ್ಗೆ ಜೋರು ಚರ್ಚೆಗಳು ನಡೆದಿವೆ. ಎಐ ಏನೇನು ಕಾರ್ಯಗಳನ್ನು ಮಾಡಬಲ್ಲದು ಎಂಬ ಅಂದಾಜು ಸಹ ಸಿಗದಷ್ಟು ಅಡ್ವಾನ್ಸ್ ಆಗಿದೆ ಆ ತಂತ್ರಜ್ಞಾನ. ಎಐ, ಮನುಷ್ಯನ ಶ್ರಮವನ್ನು ಬಹುಮಟ್ಟಿಗೆ ಕಡಿಮೆಗೊಳಿಸಲಿದೆ ಎಂದು ಒಂದು ವರ್ಗ ಸಂಭ್ರಮಿಸುತ್ತಿದ್ದರೆ, ಕೋಟ್ಯಂತರ ಜನರ ಉದ್ಯೋಗವನ್ನು ಎಐ ಕಿತ್ತುಕೊಳ್ಳಲಿದೆ ಎಂದು ಕೆಲವರು ಆತಂಕಿತರಾಗಿದ್ದಾರೆ. ಕೃತಕ ಬುದ್ಧಿಮತ್ತೆಯಿಂದ ಕಲೆಯ ಕ್ಷೇತ್ರಕ್ಕೆ ಏನೂ ಹಾನಿ ಆಗಲಾರದು ಎಂದು ಕಲಾವಿದರು ಆರಾಮವಾಗಿದ್ದರು ಆದರೆ ಅದನ್ನೀಗಾಗಲೆ ಸುಳ್ಳು ಮಾಡಿದೆ ಎಐ. ಕೃತಕ ಬುದ್ಧಿಮತ್ತೆ ರಚಿಸಿದ ಕವನಗಳು, ಅದ್ಭುತವಾದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹೀಗಿರುವಾಗ ನುರಿತ ತಂತ್ರಜ್ಞಾನ ಪ್ರವೀಣನೊಬ್ಬ ಎಐ ಬಳಸಿ ಸಿನಿಮಾ ಟ್ರೈಲರ್ (Movie Trailer) ಒಂದನ್ನು ಸೃಷ್ಟಿಸಿ ಬಿಡುಗಡೆ ಮಾಡಿದ್ದಾನೆ!
‘ಜೆನೆಸಿಸ್’ ಹೆಸರಿನ ವಿಶ್ವದ ಮೊತ್ತ ಮೊದಲ ಎಐ ಜೆನೆರೇಟೆಡ್ ಸಿನಿಮಾ ಟ್ರೈಲರ್ ಅನ್ನು ನಿಕೊಲಸ್ ನ್ಯೂಬರ್ಟ್ ಹೆಸರಿನ ಐಟಿ ಪ್ರವೀಣ ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ. ಫೋಕ್ಸ್ವ್ಯಾಗನ್ ಒಡೆತನದ ಎಲಿ ಸಂಸ್ಥೆಯಲ್ಲಿ ಸೀನಿಯರ್ ಪ್ರಾಡಕ್ಟ್ ಡಿಸೈನರ್ ಆಗಿರುವ ಜರ್ಮನಿಯ ನಿಕೋಲಸ್ ಕೆಲವೇ ಗಂಟೆಗಳ ಪ್ರಯತ್ನದಲ್ಲಿ ಅದ್ಭುತವಾದ ಸಿನಿಮಾ ಟ್ರೈಲರ್ ಅನ್ನು ನಿರ್ಮಿಸಿದ್ದಾರೆ. ನೂರಾರು ಕೋಟಿ ರೂಪಾಯಿ ಬಜೆಟ್ ವ್ಯಯಿಸಿ ಸಾವಿರಾರು ಮಂದಿ ಕೆಲಸ ಮಾಡಿದರೂ ಸೃಷ್ಟಿಸಲಾಗದಷ್ಟು ಅದ್ಭುತವಾದ ದೃಶ್ಯಗಳನ್ನು ಕೇವಲ ಕೆಲವು ಆಪ್ಗಳು, ಎಐ ತಂತ್ರಜ್ಞಾನ ಹಾಗೂ ಕಂಪ್ಯೂಟರ್ಗಳನ್ನು ಬಳಸಿ ಸೃಷ್ಟಿಸಲಾಗಿದೆ.
ಕೃತಕ ಬುದ್ಧಿಮತ್ತೆ ಹಾಗೂ ಇತರೆ ಕೆಲವು ಅಪ್ಲಿಕೇಷನ್ಗಳನ್ನು ಬಳಸಿ ಹೇಗೆ ಈ ಟ್ರೈಲರ್ ತಯಾರಿಸಿದ್ದೆಂದು ವಿವರವಾಗಿ ಟ್ವಟ್ಟರ್ನಲ್ಲಿ ಬರೆದುಕೊಂಡಿದ್ದಾರೆ ನಿಕೊಲಸ್ ನ್ಯೂಬರ್ಟ್. ಮಿಡ್ಜರ್ನಿ (Midjourney) ಹಾಗೂ ರನ್ವೇ (Runway) ಎಐ ಟೂಲ್ಗಳನ್ನು ಬಳಸಿ ತಾವು ಈ ಟ್ರೈಲರ್ ಅನ್ನು ರಚಿಸಿದ್ದಾಗಿ ನಿಕೊಲಸ್ ಹೇಳಿದ್ದಾರೆ. ಮಿಡ್ಜರ್ನಿ ಬಳಸಿ ಚಿತ್ರಗಳನ್ನು ತಯಾರಿಸಿದರೆ, ರನ್ವೇ ಬಳಸಿ ಚಿತ್ರಗಳಿಗೆ ಚಲನೆ ಅಥವಾ ವಿಡಿಯೋ ಸೃಷ್ಟಿಸಲಾಗಿದೆ. ಎಐ ನೆರವಿನಿಂದ ಸೃಷ್ಟಿಸಿದ ಚಿತ್ರಗಳು, ವಿಡಿಯೋಗಳನ್ನು ಕ್ಯಾಪ್ಕಟ್ ಅಪ್ಲಿಕೇಶನ್ ಬಳಸಿ ಎಡಿಟ್ ಮಾಡಿದ್ದಾರೆ. ಟ್ರೈಲರ್ಗೆ ಹಿನ್ನೆಲೆ ಸಂಗೀತವನ್ನು ಪಿಕ್ಸಾಬೇ ಹಾಗೂ ಸ್ಟ್ರಿಂಗ್ ಬೆಲ್ ಅಪ್ಲಿಕೇಶನ್ಗಳಿಂದ ಪಡೆದುಕೊಂಡಿದ್ದಾರೆ. ‘ಸ್ಟಾರ್ ವಾರ್ಸ್’, ‘ಅವೇಂಜರ್ಸ್’, ‘ಡ್ಯೂನ್’ ಸಿನಿಮಾಗಳನ್ನು ನೆನಪಿಸುವ ರೀತಿಯಲ್ಲಿ ಅತ್ಯದ್ಭುತವಾದ ಟ್ರೈಲರ್ ಅನ್ನು ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಒಟಿಟಿಗೆ ಬಂತು ಜಾನಿ ಡೆಪ್ vs ಅಂಬರ್ ಹರ್ಡ್ ಪ್ರಕರಣ: ಡಾಕ್ಯು ಸರಣಿಯ ಟ್ರೈಲರ್ ಬಿಡುಗಡೆ ಮಾಡಿದ ನೆಟ್ಫ್ಲಿಕ್ಸ್
ಸದ್ಯಕ್ಕೆ ನಿಕೋಲಸ್ ಟ್ರೈಲರ್ ಅಷ್ಟನ್ನೆ ಬಿಡುಗಡೆ ಮಾಡಿದ್ದಾರೆ. ಮಾತ್ರವಲ್ಲ ಅವರ ಬಳಿ ಕತೆಯಿಲ್ಲ ಕೇವಲ ಟ್ರೈಲರ್ ಅಷ್ಟೆ ಇದೆ. ಆದರೆ ಇದೇ ತಂತ್ರಜ್ಞಾನ ಬಳಸಿ ಸಿನಿಮಾ ಮಾಡಬಹುದು ಎಂಬುದನ್ನು ಟ್ರೈಲರ್ ಮೂಲಕ ನಿಕೋಲಸ್ ತೋರಿಸಿಕೊಟ್ಟಿದ್ದಾರೆ. ನಿಕೋಲಸ್ರ ಈ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜೋರು ಚರ್ಚೆಗಳು ನಡೆಯುತ್ತಿವೆ. ನಿಕೋಲಸ್ನಿಂದ ಪ್ರೇರಿತರಾಗಿ ಈಗಾಗಲೇ ಕೆಲವರು ಎಐ ಬಳಸಿ ಕಿರು ಫ್ಯಾಂಟಸಿ ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಳ್ಳುತ್ತಿದ್ದಾರೆ.
ನೂರಾರು ಜನ, ನೂರಾರು ಕೋಟಿ ಖರ್ಚು ಮಾಡಿಯೂ ಸಾಧಿಸಲಾಗದ ಗುಣಮಟ್ಟದ ದೃಶ್ಯಗಳನ್ನು ಎಐ ಮೂಲಕ ಸಾಧಿಸುವುದು ಸಾಧ್ಯ ಎಂದು ‘ಜೆನೆಸಿಸ್’ ಟ್ರೈಲರ್ ತೋರಿಸಿದೆ. ಒಂದೊಮ್ಮೆ ಇದೇ ಮಾದರಿಯಲ್ಲಿ ಸಿನಿಮಾ ನಿರ್ಮಾಣ ಆರಂಭಗೊಂಡರೆ ಚಿತ್ರರಂಗದ ವ್ಯವಸ್ಥೆಯೇ ಬುಡಮೇಲಾಗಲಿದೆ. ಬೇರೆ ಮಾದರಿಯ ಕತೆಗಳು ಹೊರಗೆ ಬರಲಿವೆ, ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಕೆಲವೇ ಕೋಟಿಗಳನ್ನು ವ್ಯಯಿಸಿ ಸಾವಿರಾರು ಕೋಟಿ ವೆಚ್ಚದ ಗುಣಮಟ್ಟವುಳ್ಳ ಸಿನಿಮಾಗಳು ನಿರ್ಮಾಣಗೊಳ್ಳಲಿವೆ. ಹೀಗೆ ಸಾಧ್ಯತೆಗಳು ಅನೇಕವಿವೆ, ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Wed, 2 August 23