100 ಕೋಟಿ ರೂಪಾಯಿ ಸನಿಹದಲ್ಲಿ ‘ಆಪನ್​ಹೈಮರ್​’ ಕಲೆಕ್ಷನ್​; ವಿವಾದದ ನಡುವೆಯೂ ಸಿನಿಮಾ ಸೂಪರ್​ ಹಿಟ್​

|

Updated on: Aug 01, 2023 | 5:33 PM

Oppenheimer Collection in India: 11 ದಿನಗಳು ಕಳೆದರೂ ‘ಆಪನ್​ಹೈಮರ್​’ ಸಿನಿಮಾಗೆ ಕೋಟಿಗಳಲ್ಲಿ ಕಲೆಕ್ಷನ್​ ಆಗುತ್ತಿದೆ. ಶೀಘ್ರದಲ್ಲೇ ಈ ಸಿನಿಮಾ 100 ಕೋಟಿ ರೂಪಾಯಿ ಗಡಿ ಮುಟ್ಟಲಿದೆ.

100 ಕೋಟಿ ರೂಪಾಯಿ ಸನಿಹದಲ್ಲಿ ‘ಆಪನ್​ಹೈಮರ್​’ ಕಲೆಕ್ಷನ್​; ವಿವಾದದ ನಡುವೆಯೂ ಸಿನಿಮಾ ಸೂಪರ್​ ಹಿಟ್​
ಕಿಲಿಯನ್​ ಮರ್ಫಿ
Follow us on

ನಿರ್ದೇಶಕ ಕ್ರಿಸ್ಟೋಫರ್​ ನೋಲನ್​ (Christopher Nolan) ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಎಲ್ಲ ಸಿನಿಮಾಗಳೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿವೆ. ಇತ್ತೀಚೆಗೆ ಬಿಡುಗಡೆಯಾದ ‘ಆಪನ್​ಹೈಮರ್​’ ಸಿನಿಮಾ ಕೂಡ ಇದಕ್ಕೆ ಹೊರತಾಗಿಲ್ಲ. ಮೊಟ್ಟ ಮೊದಲ ಬಾರಿಗೆ ಅಣು ಬಾಂಬ್​ ಕಂಡುಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್ ಅವರ ಬದುಕಿನ ಕುರಿತು ಈ ಸಿನಿಮಾ ಮೂಡಿಬಂದಿದೆ. ಜುಲೈ 21ರಂದು ರಿಲೀಸ್​ ಆಗಿದ್ದ ಈ ಸಿನಿಮಾ ಭಾರತದಲ್ಲಿ ಸೂಪರ್​ ಹಿಟ್​ ಆಗಿದೆ. ಆರಂಭದಲ್ಲಿ ಉತ್ತಮ ಓಪನಿಂಗ್​ ಪಡೆದುಕೊಂಡ ‘ಆಪನ್​ಹೈಮರ್​’ (Oppenheimer) ಚಿತ್ರ ನಂತರದಲ್ಲಿ ಕೊಂಚ ಕುಗ್ಗಿತು. ಭಗವದ್ಗೀತೆಯ ಉಲ್ಲೇಖ ಇರುವ ದೃಶ್ಯದಿಂದ ಸ್ವಲ್ಪ ವಿವಾದವೂ ಉಂಟಾಗಿತ್ತು. ಅದರ ನಡುವೆಯೂ ಈ ಚಿತ್ರ ಗೆದ್ದು ಬೀಗಿದೆ. 11 ದಿನಗಳ ಕಾಲ ಪ್ರದರ್ಶನ ಕಂಡ ಬಳಿಕ ಈ ಸಿನಿಮಾದ ಒಟ್ಟು ಕಲೆಕ್ಷನ್​ (Oppenheimer box office collection) 100 ಕೋಟಿ ರೂಪಾಯಿಗೆ ಸನಿಹದಲ್ಲಿದೆ. ಹಾಲಿವುಡ್​ನ ಈ ಚಿತ್ರ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈವರೆಗೆ 95.15 ಕೋಟಿ ರೂಪಾಯಿ ಗಳಿಸಿದೆ.

‘ಆಪನ್​ಹೈಮರ್​’ ಸಿನಿಮಾಗೆ ‘ಬಾರ್ಬಿ’ ಚಿತ್ರ ಪೈಪೋಟಿ ನೀಡಿತ್ತು. ಒಂದೇ ದಿನ ರಿಲೀಸ್​ ಆಗಿದ್ದ ಈ ಚಿತ್ರಗಳ ಪೈಕಿ ‘ಆಪನ್​ಹೈಮರ್​’ ಸಿನಿಮಾಗೆ ಹೆಚ್ಚು ಜನರು ಫಿದಾ ಆಗಿದ್ದಾರೆ. ಮೊದಲ ಮೂರ್ನಾಲ್ಕು ದಿನಗಳ ಕಾಲ ಈ ಚಿತ್ರ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿತು. ಈಗಲೂ ಹಲವು ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಆಗುತ್ತಿದೆ. ಹೊಸ ಸಿನಿಮಾಗಳ ರಿಲೀಸ್​ ನಡುವೆಯೂ ‘ಆಪನ್​ಹೈಮರ್​’ ಚಿತ್ರ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಇದನ್ನೂ ಓದಿ: ‘ಆಪನ್​ಹೈಮರ್​ ಚಿತ್ರದಲ್ಲಿ ಭಗವದ್ಗೀತೆ ದೃಶ್ಯವೇ ನನ್ನ ಫೇವರಿಟ್​’: ವಿಮರ್ಶೆ ತಿಳಿಸಿದ ಕಂಗನಾ ರಣಾವತ್​

11 ದಿನಗಳ ಪ್ರದರ್ಶನದ ಬಳಿಕ ‘ಬಾರ್ಬಿ’ ಸಿನಿಮಾಗೆ ಭಾರತದಲ್ಲಿ 36.10 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ‘ಆಪನ್​ಹೈಮರ್​’ ಚಿತ್ರಕ್ಕೆ ಕಠಿಣ ಪೈಪೋಟಿ ನೀಡಲು ಈ ಸಿನಿಮಾಗೆ ಸಾಧ್ಯವಾಗಿಲ್ಲ. 11 ದಿನಗಳು ಕಳೆದರೂ ‘ಆಪನ್​ಹೈಮರ್​’ ಸಿನಿಮಾಗೆ ಕೋಟಿಗಳಲ್ಲಿ ಕಲೆಕ್ಷನ್​ ಆಗುತ್ತಿದೆ. ಜುಲೈ 31ರಂದು ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾಗೆ 3 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಶೀಘ್ರದಲ್ಲೇ ಈ ಸಿನಿಮಾ 100 ಕೋಟಿ ರೂಪಾಯಿ ಗಡಿ ಮುಟ್ಟಲಿದೆ.

ಇದನ್ನೂ ಓದಿ: Oppenheimer: ಮೊಟ್ಟ ಮೊದಲ ಅಣು ಬಾಂಬ್​ ಪರೀಕ್ಷೆಯ ರಿಯಲ್​ ವಿಡಿಯೋ ವೈರಲ್​; ‘ಆಪನ್​ಹೈಮರ್​’ ಚಿತ್ರದಲ್ಲಿ ವ್ಯತ್ಯಾಸ ಉಂಟಾ?

ಅನೇಕ ಸೆಲೆಬ್ರಿಟಿಗಳು ‘ಆಪನ್​ಹೈಮರ್​’ ಚಿತ್ರವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಟಿ ಕಂಗನಾ ರಣಾವತ್​ ಅವರೂ ಈ ಸಿನಿಮಾ ನೋಡಿದರು. ಬಳಿಕ ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಮೂಲಕ ತಮ್ಮ ವಿಮರ್ಶೆ ತಿಳಿಸಿದರು. ಈ ಚಿತ್ರದಲ್ಲಿ ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಪಾತ್ರವನ್ನು ಐರಿಶ್​ ನಟ ಕಿಲಿಯನ್​ ಮರ್ಫಿ ಮಾಡಿದ್ದಾರೆ. ಇನ್ನುಳಿದ ಪಾತ್ರವರ್ಗದಲ್ಲಿ ಮ್ಯಾಟ್​ ಡೇಮನ್​, ಎಮಿಲಿ ಬ್ಲಂಟ್​, ರಾಬರ್ಟ್​ ಡೌನಿ ಜೂನಿಯರ್​ ಮುಂತಾದವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.