ಹಾಲಿವುಡ್ ಸಿನಿಪ್ರಿಯರ ವಲಯದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಚರ್ಚೆಗೆ ಒಳಗಾದ ಸಿನಿಮಾ ಎಂದರೆ ಅದು ‘ಆಪನ್ಹೈಮರ್’ (Oppenheimer). ನೈಜ ಘಟನೆಗಳನ್ನು ಆಧರಿಸಿ ತಯಾರಾದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಭಾರತದ ಗಲ್ಲಾಪೆಟ್ಟಿಗೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ಈ ಹಿಂದಿನ ಸಿನಿಮಾಗಳಿಗಿಂತಲೂ ಡಿಫರೆಂಟ್ ಆಗಿ ‘ಆಪನ್ಹೈಮರ್’ ಮೂಡಿಬಂದಿದೆ. ಈ ಸಿನಿಮಾದಲ್ಲಿ ಕಿಲಿಯನ್ ಮರ್ಫಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಐರ್ಲ್ಯಾಂಡ್ ಮೂಲದ ಈ ನಟನಿಗೆ ಹಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ‘ಆಪನ್ಹೈಮರ್’ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಕಿಲಿಯನ್ ಮರ್ಫಿ (Cillian Murphy) ಅವರಿಗೆ ಬರೋಬ್ಬರಿ 82 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ.
ಹಲವಾರು ವರ್ಷಗಳಿಂದ ಹಾಲಿವುಡ್ನಲ್ಲಿ ಕಿಲಿಯನ್ ಮರ್ಫಿ ಅವರು ಸಕ್ರಿಯರಾಗಿದ್ದಾರೆ. ‘ಬ್ಯಾಟ್ಮ್ಯಾನ್ ಬಿಗಿನ್ಸ್’, ‘ದಿ ಡಾರ್ಕ್ ನೈಟ್’, ‘ಡಂಕಿರ್ಕ್’ ಸೇರಿದಂತೆ ಅನೇಕ ಗಮನಾರ್ಹ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕ್ರಿಸ್ಟೋಫರ್ ನೋಲನ್ ಜೊತೆ ಅವರಿಗೆ ಇರುವ ಒಡನಾಟ ಬಹಳ ಹಳೆಯದು. ಆದರೆ ಅವರಿಗೆ ನೋಲನ್ ನಿರ್ದೇಶನದ ಸಿನಿಮಾದಲ್ಲಿ ಮೊದಲ ಬಾರಿಗೆ ಮುಖ್ಯಭೂಮಿಕೆ ನಿಭಾಯಿಸುವ ಚಾನ್ಸ್ ಸಿಕ್ಕಿದ್ದು ‘ಆಪನ್ಹೈಮರ್’ ಚಿತ್ರದ ಮೂಲಕ. ಅಣು ಬಾಂಬ್ ಜನಕ ಎಂದೇ ಖ್ಯಾತರಾಗಿದ್ದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್ಹೈಮರ್ ಅವರ ಜೀವನದ ಕುರಿತು ಈ ಸಿನಿಮಾ ಸಿದ್ಧವಾಗಿದ್ದು, ಆಪನ್ಹೈಮರ್ ಪಾತ್ರವನ್ನು ಕಿಲಿಯನ್ ಮರ್ಫಿ ಮಾಡಿದ್ದಾರೆ.
ಇದನ್ನೂ ಓದಿ: Oppenheimer: ‘ಆಪನ್ಹೈಮರ್’ ಪಾತ್ರಕ್ಕಾಗಿ ಅಪಾಯಕಾರಿ ಡಯೆಟ್ ಮಾಡಿದ ನಟ ಕಿಲಿಯನ್ ಮರ್ಫಿ; ದಿನಕ್ಕೆ ಒಂದೇ ಬಾದಾಮಿ?
ಕಿಲಿಯನ್ ಮರ್ಫಿ ಅವರು ಪ್ರತಿಭಾವಂತ ನಟ ಎಂಬುದರಲ್ಲಿ ಅನುಮಾನವೇ ಇಲ್ಲ. ‘ಆಪನ್ಹೈಮರ್’ ಸಿನಿಮಾದಲ್ಲಿ ಅವರ ನಟನೆಗೆ ಸಖತ್ ಸ್ಕೋಪ್ ಸಿಕ್ಕಿದೆ. ಇಡೀ ಸಿನಿಮಾವನ್ನು ಅವರೇ ಆವರಿಸಿಕೊಂಡಿದ್ದಾರೆ. ವಿವಿಧ ಶೇಡ್ನಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ. ಈ ಪಾತ್ರಕ್ಕಾಗಿ ಅವರು 10 ಮಿಲಿಯನ್ ಡಾಲರ್ ಸಂಭಾವನೆ ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಭಾರತದ ಕರೆನ್ಸಿಯಲ್ಲಿ ಅಂದಾಜು 82 ಕೋಟಿ 36 ಲಕ್ಷದ 65 ಸಾವಿರ ರೂಪಾಯಿ ಆಗಲಿದೆ. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.
ಇದನ್ನೂ ಓದಿ: Oppenheimer: ಮೊಟ್ಟ ಮೊದಲ ಅಣು ಬಾಂಬ್ ಪರೀಕ್ಷೆಯ ರಿಯಲ್ ವಿಡಿಯೋ ವೈರಲ್; ‘ಆಪನ್ಹೈಮರ್’ ಚಿತ್ರದಲ್ಲಿ ವ್ಯತ್ಯಾಸ ಉಂಟಾ?
‘ಆಪನ್ಹೈಮರ್’ ಸಿನಿಮಾದಲ್ಲಿ ರಾಬರ್ಟ್ ಡೌನಿ ಜೂನಿಯರ್, ಎಮಿಲಿ ಬ್ಲಂಟ್ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಮೂಲಗಳ ಪ್ರಕಾರ, ಇವರಿಬ್ಬರು ತಲಾ 4 ಮಿಲಿಯನ್ ಡಾಲರ್ (ಅಂದಾಜು 32 ಕೋಟಿ ರೂ.) ಸಂಭಾವನೆ ಪಡೆದಿದ್ದಾರೆ. ಕ್ರಿಸ್ಟೋಫರ್ ನೋಲನ್ ಅವರ ಪತ್ನಿ ಎಮ್ಮಾ ಥಾಮಸ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಿಂದ ಅವರಿಗೆ ಸಖತ್ ಲಾಭ ಆಗಿದೆ. ಭಾರತದಲ್ಲಿ ‘ಆಪನ್ಹೈಮರ್’ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವತ್ತ ಮುನ್ನುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:42 pm, Wed, 2 August 23