ಎಂಟು ಸಾವಿರ ಕೋಟಿ ರೂಪಾಯಿ ದಾಟಿದ ‘ಬಾರ್ಬಿ’ ಸಿನಿಮಾ ಕಲೆಕ್ಷನ್; ಭಾರತದಲ್ಲಿ ಗಳಿಕೆ ಎಷ್ಟು?

| Updated By: Rajesh Duggumane

Updated on: Aug 07, 2023 | 3:14 PM

‘ಬಾರ್ಬಿ’ ನಿರ್ದೇಶಕಿ ಗ್ರೆಟಾ ಗರ್ವಿಗ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಹಿಳಾ ನಿರ್ದೇಶಕಿ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ ಇಷ್ಟು ದೊಡ್ಡ ಮೊತ್ತದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು.

ಎಂಟು ಸಾವಿರ ಕೋಟಿ ರೂಪಾಯಿ ದಾಟಿದ ‘ಬಾರ್ಬಿ’ ಸಿನಿಮಾ ಕಲೆಕ್ಷನ್; ಭಾರತದಲ್ಲಿ ಗಳಿಕೆ ಎಷ್ಟು?
ಬಾರ್ಬಿ ಸಿನಿಮಾ
Follow us on

ಹಾಲಿವುಡ್ ಸಿನಿಮಾಗಳ ಮಾರುಕಟ್ಟೆ ತುಂಬಾನೇ ದೊಡ್ಡದು. ಸಾವಿರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಳ್ಳುವ ಸಿನಿಮಾಗಳು ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತವೆ. ಇತ್ತೀಚೆಗೆ ರಿಲೀಸ್ ಆದ ಇಂಗ್ಲಿಷ್​ನ ‘ಬಾರ್ಬಿ’ ಸಿನಿಮಾ (Barbie Movie) ಸೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ಅನೇಕರು ಕಣ್ತುಂಬಿಕೊಂಡಿದ್ದಾರೆ. ಅಮೆರಿಕ, ಇಂಗ್ಲೆಂಡ್, ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಈ ಚಿತ್ರ ರಿಲೀಸ್ ಆಗಿ ಸದ್ದು ಮಾಡಿದೆ. ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡ ಚಿತ್ರಗಳ ಸಾಲಿಗೆ  ಬಾರ್ಬಿಸಿನಿಮಾ ಕೂಡ ಸೇರ್ಪಡೆ ಆಗಿದೆ.

ರಯಾನ್​ ಗಾಸ್ಲಿಂಗ್, ಮಾರ್ಗೋ ರಾಬಿ ನಟನೆಯ ‘ಬಾರ್ಬಿ’ ಚಿತ್ರ ಜುಲೈ 21ರಂದು ವಿಶ್ವಾದ್ಯಂತ ಬಿಡುಗಡೆ ಆಯಿತು. ಈ ಸಿನಿಮಾ ರಿಲೀಸ್ ಆಗಿ ಸಂಚಲನ ಸೃಷ್ಟಿ ಮಾಡಿತು. ಗಳಿಕೆಯ ವಿಷಯದಲ್ಲಿ ಸಿನಿಮಾ ಒಂದರ ನಂತರ ಒಂದರಂತೆ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಬಿಡುಗಡೆಯಾದ 3 ವಾರಗಳಲ್ಲಿ ಚಿತ್ರ 1 ಬಿಲಿಯನ್ ಡಾಲರ್ ಗಳಿಕೆ ಮಾಡಿದೆ. ಅಂದರೆ, ಈ ಚಿತ್ರದ ಗಳಿಕೆ 8,268 ಕೋಟಿ ರೂಪಾಯಿ. ‘ಬಾರ್ಬಿ’ ನಿರ್ದೇಶಕಿ ಗ್ರೆಟಾ ಗರ್ವಿಗ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಹಿಳಾ ನಿರ್ದೇಶಕಿ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ ಇಷ್ಟು ದೊಡ್ಡ ಮೊತ್ತದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು.

ಚಿತ್ರದ ಬಜೆಟ್​ 1200 ಕೋಟಿ ರೂಪಾಯಿ

‘ಬಾರ್ಬಿ’ ಚಿತ್ರ ಸಣ್ಣಪುಟ್ಟ ಬಜೆಟ್​ನಲ್ಲಿ ಸಿದ್ಧವಾದ ಸಿನಿಮಾ ಅಲ್ಲ. ಈ ಚಿತ್ರದ ಬಜೆಟ್​ 1200 ಕೋಟಿ ರೂಪಾಯಿಯನ್ನೂ ಮೀರಿದೆ. ಈ ಸಿನಿಮಾ 3 ವಾರಗಳಲ್ಲಿ ವಿಶ್ವಾದ್ಯಂತ 8 ಸಾವಿರ ಕೋಟಿಗೂ ಹೆಚ್ಚು ಗಳಿಸಿರುವುದು ತಂಡದ ಖುಷಿ ಹೆಚ್ಚಿಸಿದೆ. ಮಾರ್ಗೋ ರಾಬಿ ಅವರು ಬಾರ್ಬಿ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಈ ಚಿತ್ರದ ಮೂಲಕ ಅವರು ದೊಡ್ಡ ಗೆಲುವು ಕಂಡಿದ್ದಾರೆ.

ಭಾರತದ ಕಲೆಕ್ಷನ್ ಎಷ್ಟು?

ಭಾರತದಲ್ಲಿ ‘ಬಾರ್ಬಿ’ ಚಿತ್ರಕ್ಕೆ ಹೇಳಿಕೊಳ್ಳುವಂಥ ಗೆಲುವು ಸಿಗಲಿಲ್ಲ. ಈ ಸಿನಿಮಾಗೆ ಭಾರತದಲ್ಲಿ ಈವರೆಗೆ 38 ಕೋಟಿ ರೂಪಾಯಿ ಗಳಿಕೆ ಮಾಡಲಷ್ಟೇ ಸಾಧ್ಯವಾಗಿದೆ. ಮೊದಲ ದಿನ ಈ ಚಿತ್ರ ಭಾರತದಲ್ಲಿ ಕೇವಲ 4.5 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಮೊದಲ ವೀಕೆಂಡ್​ಗೆ ಈ ಚಿತ್ರದ ಗಳಿಕೆ 17 ಕೋಟಿ ರೂಪಾಯಿ ಆಯಿತು. ಈವರೆಗೆ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ 38 ಕೋಟಿ ರೂಪಾಯಿ ಬಾಚಿಕೊಂಡಿದೆ.

ಆಪನ್​ಹೈಮರ್ ಚಿತ್ರದಿಂದ ಸ್ಪರ್ಧೆ

ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್​ಹೈಮರ್’ ಸಿನಿಮಾ ಕೂಡ ಜುಲೈ 21ರಂದು ರಿಲೀಸ್ ಆಯಿತು. ಹಾಲಿವುಡ್​ನ ಎರಡು ದೊಡ್ಡ ಪ್ರಾಜೆಕ್ಟ್​ಗಳು ಒಂದೇ ದಿನ ರಿಲೀಸ್ ಆಗಿದ್ದರಿಂದ ಸಹಜವಾಗಿಯೇ ನಿರೀಕ್ಷೆ ಸೃಷ್ಟಿ ಆಗಿತ್ತು. ಅಣು ಬಾಂಬ್ ಕಂಡು ಹಿಡಿದ ಜೆ. ರಾಬರ್ಟ್​ ಆಪನ್​ಹೈಮರ್ ಕುರಿತು ಈ ಸಿನಿಮಾ ಸಿದ್ಧಗೊಂಡಿದೆ. ಭಾರತದಲ್ಲಿ ಈ ಚಿತ್ರ ಮೇಲುಗೈ ಸಾಧಿಸಿದೆ. ಕಿಲಿಯನ್ ಮರ್ಫಿ ಅವರು ಜೆ ರಾಬರ್ಟ್​ ಆಪನ್​ಹೈಮರ್ ಪಾತ್ರದಲ್ಲಿ ಗಮನ ಸೆಳೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:43 pm, Mon, 7 August 23