ನಟಿ ಅದಾ ಶರ್ಮಾ (Adah Sharma) ಅವರಿಗೆ ಭಾರಿ ಡಿಮ್ಯಾಂಡ್ ಸೃಷ್ಟಿ ಆಗಿದೆ. ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದಲ್ಲಿ ಮುಖ್ಯ ಭೂಮಿಕೆ ಮಾಡಿದ ಅವರು ಈಗ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದಕ್ಕಿಂತ ಮತ್ತೊಂದು ಒಳ್ಳೆಯ ಅವಕಾಶ ಅವರನ್ನು ಹುಡುಕಿಕೊಂಡು ಬರುತ್ತಿವೆ. ಈಗ ಅವರು ಜಾಗತಿಕ ಮಟ್ಟದ ಒಂದು ಪ್ರಾಜೆಕ್ಟ್ಗೆ ಸಹಿ ಮಾಡಿದ್ದಾರೆ. ಅದರಲ್ಲಿ ಅವರು ಲೇಡಿ ಸೂಪರ್ ಹೀರೋ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸೂಪರ್ ಹೀರೋ ಯಾರು ಎಂಬುದನ್ನು ಅದಾ ಶರ್ಮಾ ಬಹಿರಂಗಪಡಿಸಿದ್ದಾರೆ. ಅವರಿಗೆ ಆಂಜನೇಯನ ಮೇಲೆ ಅಪಾರವಾದ ಭಕ್ತಿ ಇದೆ. ಹಾಗಾಗಿ ಆಂಜನೇಯನೇ (Hanuman) ತಮ್ಮ ಸೂಪರ್ ಹೀರೋ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
‘ಮಾನವೀಯತೆ, ಅಗಾದವಾದ ಶಕ್ತಿ, ಏಕಾಗ್ರತೆ, ಜ್ಞಾನ ಮುಂತಾದ ಗುಣಗಳ ಮಿಶ್ರಣದಂತೆ ಆಂಜನೇಯ ವ್ಯಕ್ತಿತ್ವ ಇದೆ. ಆತ ಅದ್ಭುತ ಸಂಗೀತಗಾರ ಕೂಡ ಹೌದು. ಯಾವುದೇ ಆಕಾರವನ್ನು ಪಡೆಯಬಲ್ಲ ಶಕ್ತಿ ಆತನಿಗೆ ಇದೆ. ಅವನೇ ನನ್ನ ಸೂಪರ್ ಹೀರೋ’ ಎಂದು ಹೇಳುವ ಮೂಲಕ ಅದಾ ಶರ್ಮಾ ಅವರು ಹನುಮಂತನ ಗುಣಗಾನ ಮಾಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆದ ಬಳಿಕ ಅದಾ ಶರ್ಮಾ ಅವರ ಖ್ಯಾತಿ ಹೆಚ್ಚಾಗಿದೆ. ಅವರ ಸೂಪರ್ ಹೀರೋ ಪ್ರಾಜೆಕ್ಟ್ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಖ್ಯಾತಿಯ ನಟಿ ಅದಾ ಶರ್ಮಾ ಮುಂದಿನ ಸಿನಿಮಾ ‘ಸಿ.ಡಿ’ ಪೋಸ್ಟರ್ ವೈರಲ್
ಬಾಲಿವುಡ್ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅದಾ ಶರ್ಮಾ ಅವರು ಫೇಮಸ್ ಆಗಿದ್ದಾರೆ. ಕನ್ನಡದ ‘ರಣವಿಕ್ರಮ’ ಸಿನಿಮಾದಲ್ಲಿ ಅವರು ಪುನೀತ್ ರಾಜ್ಕುಮಾರ್ ಜೊತೆ ನಟಿಸಿದ್ದರು. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿ ಅವರು ಜನರನ್ನು ರಂಜಿಸಿದ್ದಾರೆ. ಅವರಿಗೆ ದೊಡ್ಡ ಗೆಲುವು ಸಿಕ್ಕಿದ್ದು ‘ದಿ ಕೇರಳ ಸ್ಟೋರಿ’ ಸಿನಿಮಾದ ಮೂಲಕ. ಈ ಚಿತ್ರದಲ್ಲಿ ಅವರು ಎರಡು ಶೇಡ್ನ ಪಾತ್ರ ನಿಭಾಯಿಸಿದ್ದಾರೆ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವ ಹಿಂದೂ ಹುಡುಗಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಅಂಥವರ ಜತೆ ಕೆಲಸ ಮಾಡೋಕೆ ನಂಗೆ ಇಷ್ಟ ಇಲ್ಲ’: ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ
ಅದಾ ಶರ್ಮ ಅವರು ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಇದು ಬ್ಲ್ಯೂ ವೇಲ್ ಗೇಮ್ ಕುರಿತ ಸಿನಿಮಾ ಆಗಿರಲಿದೆ. ಅದರಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಆ ಚಿತ್ರ ಬಿಡುಗಡೆ ಆಗುವುದಕ್ಕಿಂತಲೂ ಮುನ್ನವೇ ‘ಸಿ.ಡಿ’ ಸಿನಿಮಾದ ಬಗ್ಗೆ ಮಾಹಿತಿ ಕೇಳಿಬಂದಿದೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿದೆ. ‘ಕ್ರಿಮಿನಲ್ ಅಥವಾ ಡೆವಿಲ್’ ಎಂಬ ಟ್ಯಾಗ್ಲೈನ್ ಈ ಪೋಸ್ಟರ್ನಲ್ಲಿ ಕಾಣಿಸಿದೆ. ಸಿ ಎಂದರೆ ಕ್ರಿಮಿನಲ್, ಡಿ ಎಂದರೆ ಡೆವಿಲ್ ಎಂದು ನೆಟ್ಟಿಗರು ಅರ್ಥ ಮಾಡಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.