ನಟಿ ಪರಿಣಿತಿ ಚೋಪ್ರಾ-ಸಂಸದ ರಾಘವ್ ಚಡ್ಡಾ ಮದುವೆ ದಿನಾಂಕ ನಿಗದಿ
Parineeti-Raghav: ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಇವರ ವಿವಾಹ ದಿನಾಂಕ ನಿಶ್ಚಯಗೊಂಡಿದೆ.
ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ (Parineeti Chopra) ಹಾಗೂ ಯುವ ಸಂಸದ, ಆಮ್ ಆದ್ಮಿ ಪಕ್ಷದ ಯುವ ಮುಖಂಡ ರಾಘವ್ ಚಡ್ಡಾ (Raghav Chadha) ಕೆಲ ತಿಂಗಳ ಹಿಂದೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರು ಕೆಲ ಸಮಯದಿಂದ ಪ್ರೀತಿಯಲ್ಲಿದ್ದು, ತಮ್ಮ ಪ್ರೀತಿಯನ್ನು ವಿವಾಹವನ್ನಾಗಿ ಪರಿವರ್ತಿಸಲು ನಿಶ್ಚಯಿಸಿ ಕೆಲವು ತಿಂಗಳ ಹಿಂದಷ್ಟೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ವಿವಾಹ ದಿನಾಂಕ ನಿಗದಿ ಮಾಡಿಕೊಂಡಿರಲಿಲ್ಲ. ಇದೀಗ ಈ ಜೋಡಿಯ ವಿವಾಹ ದಿನಾಂಕ ಸಹ ನಿಶ್ಚಯವಾಗಿದೆ.
ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರುಗಳು ವಿವಾಹವು ಸೆಪ್ಟೆಂಬರ್ 25ಕ್ಕೆ ನಿಗದಿಯಾಗಿದೆ. ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಈ ಜೋಡಿ ವಿವಾಹವಾಗಲಿದ್ದು ಈಗಾಗಲೇ ಖರೀದಿ ಕಾರ್ಯ, ಅತಿಥಿಗಳ ಅಂತಿಮ ಪಟ್ಟಿ ತಯಾರಿ, ಮದುವೆ ನಡೆಯುವ ಸ್ಥಳ ನಿಗದಿ ಇನ್ನಿತರೆ ಕಾರ್ಯಗಳು ಮುಗಿದಿವೆ ಎನ್ನಲಾಗುತ್ತಿದೆ. ಮಾಮೂಲಿನಂತೆ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರುಗಳು ಡಿಸೈನರ್ ಬಟ್ಟೆಗಳಲ್ಲಿ ಮಿಂಚಲಿದ್ದಾರೆ. ಇನ್ನು ಪರಿಣಿತಿ ಡಿಸೈನರ್ ಆಭರಣಗಳನ್ನು ಧರಿಸಲಿದ್ದು, ಅವುಗಳೂ ಸಹ ತಯಾರಾಗಿವೆ ಎನ್ನಲಾಗುತ್ತಿದೆ.
ರಾಘವ್ ಚಡ್ಡಾ ಹಾಗೂ ಪರಿಣಿತಿ ಚೋಪ್ರಾ ಮೇ 13 ರಂದು ದೆಹಲಿಯ ಐಶಾರಾಮಿ ಹೋಟೆಲ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇವರ ಅದ್ಧೂರಿ ನಿಶ್ಚಿತಾರ್ಥಕ್ಕೆ ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ನಟ ನಿಕ್ ಜೋನಸ್, ಬಾಲಿವುಡ್ ತಾರೆಯರಾದ ಕರಣ್ ಜೋಹರ್, ಅರ್ಜುನ್ ಕಪೂರ್ ಇನ್ನೂ ಹಲವರು ಬಂದಿದ್ದರು. ಅದರ ಜೊತೆಗೆ ದೆಹಲಿ ಸಿಎಂ, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿಯ ಇನ್ನೂ ಹಲವು ಮುಖಂಡರು, ದೆಹಲಿ ಸರ್ಕಾರದ ಪ್ರಮುಖ ಸಚಿವರುಗಳು ಭಾಗಿಯಾಗಿದ್ದರು.
ಇದನ್ನೂ ಓದಿ:ಪರಿಣಿತಿ ಚೋಪ್ರಾ-ರಾಘವ್ ನಿಶ್ಚಿತಾರ್ಥಕ್ಕೆ ಹಲವು ಅತಥಿಗಳು, ವಿಶೇಷ ಖಾದ್ಯಗಳು
ಪರಿಣಿತಿ ಚೋಪ್ರಾ ಬಾಲಿವುಡ್ನ ಜನಪ್ರಿಯ ನಟಿಯರಲ್ಲಿ ಒಬ್ಬರು. 2011ರಲ್ಲಿ ‘ಲೇಡೀಸ್ vs ರಿಕ್ಕಿ ಬೇಲ್’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಪರಿಣಿತಿ ಅದರ ಮರುವರ್ಷವೇ ‘ಇಶಕ್ಜಾದೆ’ ಸಿನಿಮಾ ಮೂಲಕ ನಾಯಕಿಯಾದರು. ಈ ವರೆಗೆ ಹದಿನಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಹಾಗೂ ‘ಅಮರ್ಸಿಂಗ್ ಚಮ್ಕೀಲಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನು ಪರಿಣಿತಿ ಪತಿ ಆಗಲಿರುವ ರಾಘವ್ ಸಿಂಗ್ ಚಡ್ಡಾ, ಯುವ ರಾಜ್ಯಸಭಾ ಸದಸ್ಯರಾಗಿದ್ದು, ಎಎಪಿಯ ಪ್ರಮುಖ ನಾಯಕರಲ್ಲಿ ಒಬ್ಬರು ಸಹ. ಚಾರ್ಟೆಡ್ ಅಕೌಂಟಟ್ ಆಗಿರುವ ರಾಘವ್ ಚಡ್ಡಾ, ಎಳೆಯ ವಯಸ್ಸಿನಲ್ಲಿಯೇ ರಾಜಕೀಯದೆಡೆಗೆ ಆಸಕ್ತಿ ಬೆಳಸಿಕೊಂಡರು. 2015ರಲ್ಲಿ ದೆಹಲಿಯಲ್ಲಿ ಎಎಪಿ ಗೆದ್ದಾದ ಪಕ್ಷದ ಖಜಾಂಚಿಯಾಗಿ ನೇಮಕವಾದರು. ಬಳಿಕ 2019ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯೆದುರು ಸೋತರು. 2020ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದು ಶಾಸಕರಾದರು. 2022ರಲ್ಲಿ ಪಂಜಾಬ್ ಮೂಲಕ ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ