ಚಿತ್ರರಂಗಕ್ಕೆ ಕಾಲಿಟ್ಟಮೇಲೆ ಬಹುತೇಕರು ಹೆಸರು ಬದಲಾಯಿಸಿಕೊಳ್ಳುತ್ತಾರೆ. ಇನ್ನೂ ಹಲವರು ಬಣ್ಣದ ಲೋಕದಲ್ಲಿ ಹಲವು ವರ್ಷ ಸೈಕಲ್ ಹೊಡೆದು, ಯಶಸ್ಸು ಸಿಗಲಿಲ್ಲ ಎಂದಾಗ ಹೆಸರು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೆ. ಆದರೆ ಈಗಾಗಲೇ ಬ್ರ್ಯಾಂಡ್ ಆಗಿರುವ ಹೆಸರನ್ನು ಚೇಂಜ್ ಮಾಡಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಆದರೆ ಈ ಮಾತು ನಟ ಅಜಯ್ ದೇವಗನ್ ಅವರಿಗೆ ಯಾಕೋ ಅನ್ವಯ ಆಗುತ್ತಿಲ್ಲ. ಯಾಕೆಂದರೆ, ಅವರೀಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಅಜಯ್ ದೇವಗನ್ ಬದಲಿಗೆ ಸುದರ್ಶನ್ ಆಗಿದ್ದಾರೆ.
ಇದು ಗಾಸಿಪ್ ಅಲ್ಲ. ಸ್ವತಃ ಅಜಯ್ ದೇವಗನ್ ಅವರೇ ಒಂದು ವಿಡಿಯೋ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಎಲ್ಲ ಅಭಿಮಾನಿಗಳಿಗೆ ಹೊಸ ಸುದ್ದಿ ನೀಡಿದ್ದಾರೆ. ಅದರಲ್ಲಿ ಅಜಯ್ ಹೇಳಿರುವ ಮಾತು ಕೇಳಿದ ಬಳಿಕ ಫ್ಯಾನ್ಸ್ ತಲೆಗೆ ಹುಳ ಬಿಟ್ಟಂಗಾಗಿದೆ!
‘ನಿಮಗೆ ಎಷ್ಟು ಸಲ ಹೇಳಬೇಕು? ಅಜಯ್ ಅಂತ ಯಾರನ್ನು ಕರೆಯುತ್ತಿದ್ದೀರಿ? ನನ್ನ ಹೆಸರು ಸುದರ್ಶನ್’ ಎಂದು ಅಜಯ್ ಹೇಳಿದ್ದಾರೆ. ಅಷ್ಟಕ್ಕೂ ಅವರು ನಿಜವಾಗಿಯೂ ಹೆಸರು ಬದಲಾಯಿಸಿಕೊಂಡಿದ್ದಾರಾ? ಯಾಕೋ ಅನುಮಾನ. ಇದೇ ವಿಡಿಯೋದ ಜೊತೆಗೆ ಅವರು ನೀಡಿದ ಒಂದು ಕ್ಯಾಪ್ಷನ್ ಮತ್ತು ಹ್ಯಾಶ್ಟ್ಯಾಗ್ ಕೂಡ ಗಮನ ಸೆಳೆಯುತ್ತಿದೆ. ಅದರಲ್ಲಿ ಒಂದು ಸುಳಿವನ್ನು ಅವರು ಬಿಟ್ಟುಕೊಟ್ಟಿದ್ದಾರೆ. #EntertainmentKaAllRounder ಎಂಬ ಹ್ಯಾಶ್ಟ್ಯಾಗ್ ಜೊತೆ ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ಗೆ ಟ್ಯಾಗ್ ಮಾಡಿದ್ದಾರೆ.
ಅಂದರೆ, ಅಜಯ್ ಓಟಿಟಿ ಪ್ಲಾಟ್ಫಾರ್ಮ್ಗೆ ಎಂಟ್ರಿ ನೀಡುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಅವರು ಯಾವುದೋ ವೆಬ್ ಸಿರೀಸ್ನಲ್ಲಿ ನಟಿಸುತ್ತಿರಬಹುದು. ಅದರಲ್ಲಿ ಅವರ ಪಾತ್ರದ ಹೆಸರು ಸುದರ್ಶನ್ ಆಗಿರಬಹುದು. ಅದರ ಪ್ರಚಾರಕ್ಕಾಗಿ ಹೀಗೆಲ್ಲ ಮಾಡಿದ್ದಾರೆ ಎಂದು ಊಹಿಸಲಾಯಿತು. ಅದರ ಬೆನ್ನಲ್ಲೇ ಅವರು ಮತ್ತೊಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಜಾಹೀರಾತಿನಲ್ಲಿ ಅಜಯ್ ನಟಿಸಿದ್ದಾರೆ. ಅದರಲ್ಲಿ ಅವರ ಹೆಸರು ಸುದರ್ಶನ್. ಸದ್ಯ ಈ ತಮಾಷೆಯ ವಿಡಿಯೋ ವೈರಲ್ ಆಗುತ್ತಿದೆ.
ಅಜಯ್ ದೇವಗನ್ ನಿರ್ಮಾಣ ಮಾಡಿರುವ ‘ದಿ ಬಿಗ್ ಬುಲ್’ ಸಿನಿಮಾ ಕೂಡ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರ ಮಾಡಿದ್ದಾರೆ. ಹರ್ಷದ್ ಮೆಹ್ತಾ ನಡೆಸಿದ ಷೇರು ಮಾರ್ಕೆಟ್ ಹಗರಣವನ್ನು ಆಧರಿಸಿ ಈ ಚಿತ್ರ ತಯಾರಾಗಿದೆ.
ಇದನ್ನೂ ಓದಿ: ‘ದಿ ಬಿಗ್ ಬುಲ್’ ರಿಲೀಸ್ ಡೇಟ್ ಬಹಿರಂಗ; ಇದು ಹರ್ಷದ್ ಮೆಹ್ತಾ ಹಗರಣದ ಇನ್ನೊಂದು ವರ್ಷನ್!