Tripura Election Results: ತ್ರಿಪುರಾದಲ್ಲಿ ಕಿಂಗ್ ಮೇಕರ್ ಆಗಲಿದೆಯೇ ಟಿಪ್ರಾ ಮೋಥಾ? ಯಾರಿದು ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೆಬ್ಬರ್ಮಾ?
Pradyot Bikram Manikya Debbarma: ಟಿಪ್ರಾ ಮೋಥಾಗೆ ಪ್ರದ್ಯೋತ್ ದೇಬ್ ಬರ್ಮಾ ನೇತೃತ್ವವಿದ್ದು ಇದು ರಾಜಕೀಯ ಪಕ್ಷವಾಗುವ ಮೊದಲು, ಸಾಮಾಜಿಕ ಸಂಘಟನೆಯಾಗಿತ್ತು. ಇವರು TNT-The Northeast Today ಪತ್ರಿಕೆಯ ಸಂಪಾದಕರೂ ಆಗಿದ್ದರು.
ದೆಹಲಿ: ಟಿಪ್ರಾ ಮೋಥಾ (Tipraha Indigenous Progressive Regional Alliance) ಮುಖ್ಯಸ್ಥ ಮತ್ತು ತ್ರಿಪುರದ ರಾಜವಂಶಸ್ಥರಾದ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೆಬ್ಬರ್ಮಾ (Pradyot Bikram Manikya Debbarma) ತ್ರಿಪುರಾದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯ(Tripura Election )ಹೈಲೈಟ್ ಆಗಿದ್ದಾರೆ. ಕಾಂಗ್ರೆಸ್ ಮೈತ್ರಿಕೂಟವು ತನ್ನ ಮೈತ್ರಿಕೂಟಕ್ಕೆ ಸೇರಲು ಟಿಪ್ರಾ ಮೋಥಾವನ್ನು ಸ್ವಾಗತಿಸಿದ ನಂತರ ಟಿಪ್ರಾ ಮೋಥಾವನ್ನು ತ್ರಿಪುರಾ ಚುನಾವಣೆ 2023 ರ ಕಿಂಗ್ ಮೇಕರ್ ಎಂದು ಕರೆಯಲಾಗುತ್ತದೆ. 2023ರ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಟಿಪ್ರಾ ಮೋಥಾ 42 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತ್ರಿಪುರಾ ವಿಧಾನಸಭಾ ಚುನಾವಣೆಗೆ ಮುನ್ನ ಪ್ರದ್ಯೋತ್ ದೆಬ್ಬರ್ಮಾ ಯಾವುದೇ ಮೈತ್ರಿಯನ್ನು ಒಪ್ಪಿಕೊಂಡಿರಲಿಲ್ಲ.
ಯಾರು ಈ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೆಬ್ಬರ್ಮಾ?
ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿ ಮತ್ತು ಈಶಾನ್ಯ ಉಸ್ತುವಾರಿ ಲುಯಿಜಿನ್ಹೊ ಫಲೈರೊ ಅವರೊಂದಿಗಿನ ಭಿನ್ನಾಭಿಪ್ರಾಯಗಳ ನಂತರ 2019 ರಲ್ಲಿ ಪಕ್ಷವನ್ನು ತೊರೆಯುವ ಮೊದಲು ದೆಬ್ಬರ್ಮಾ ಅವರು ಕಾಂಗ್ರೆಸ್‌ನೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಮಾಜಿ ರಾಜಮನೆತನದ ವಂಶಸ್ಥ ಪ್ರದ್ಯೋತ್ ಬಿಕ್ರಮ್ ಕಿಶೋರ್ ಮಾಣಿಕ್ಯ ದೇಬ್ ಬರ್ಮಾ ಬಹದ್ದೂರ್ 2019 ರಲ್ಲಿ ಟಿಪ್ರಾ ಮೋಥಾವನ್ನು ಸ್ಥಾಪಿಸಿದರು.
ಟಿಪ್ರಾ ಮೋಥಾಗೆ ಪ್ರದ್ಯೋತ್ ದೇಬ್ ಬರ್ಮಾ ನೇತೃತ್ವವಿದ್ದು ಇದು ರಾಜಕೀಯ ಪಕ್ಷವಾಗುವ ಮೊದಲು, ಸಾಮಾಜಿಕ ಸಂಘಟನೆಯಾಗಿತ್ತು. ಇವರು TNT-The Northeast Today ಪತ್ರಿಕೆಯ ಸಂಪಾದಕರೂ ಆಗಿದ್ದರು.
ನವದೆಹಲಿಯಲ್ಲಿ ಜುಲೈ 4, 1978 ರಂದು ಬುಬಾಗ್ರಾ ಪ್ರದ್ಯೋತ್ ಮಾಣಿಕ್ಯ ಅವರು ಮಹಾರಾಜ ಕಿರಿತ್ ಬಿಕ್ರಮ್ ಕಿಶೋರ್ ದೆಬ್ಬರ್ಮಾ (ತ್ರಿಪುರದ 185 ನೇ ರಾಜ) ಮತ್ತು ಮಹಾರಾಣಿ ಭಿಬು ಕುಮಾರಿ ದೇವಿಯ ಮೊದಲ ಮಗನಾಗಿ ಜನಿಸಿದರು. ಅವರ ತಂದೆ-ತಾಯಿ ಇಬ್ಬರೂ ಕಾಂಗ್ರೆಸ್‌ನಲ್ಲಿದ್ದರು.ಅವರು ತಮ್ಮ ಆರಂಭಿಕ ದಿನಗಳನ್ನು ಮೇಘಾಲಯದ ಶಿಲ್ಲಾಂಗ್‌ನಲ್ಲಿ ತ್ರಿಪುರಾ ಕೋಟೆಯಲ್ಲಿ ಕಳೆದರು. ಅಲ್ಲದೆ, ಅವರ ಆರಂಭಿಕ ಉನ್ನತ ಶಿಕ್ಷಣ ಶಿಲ್ಲಾಂಗ್‌ನಲ್ಲಿತ್ತು.
ಇದನ್ನೂ ಓದಿ:ಗ್ರೇಟರ್ ಟಿಪ್ರಾಲ್ಯಾಂಡ್ ಹೊರತುಪಡಿಸಿ ಟಿಪ್ರಾ ಮೋಥಾದ ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸಲು ಸಿದ್ಧ: ಬಿಜೆಪಿ
ಕಿಂಗ್ ಮೇಕರ್ ಆಗಲಿದೆಯೇ ಟಿಪ್ರಾ ಮೋಥಾ
ಮತ ಎಣಿಕೆ ಪ್ರಕ್ರಿಯೆ ಮುಂದುವರಿದ್ದು, ಇಲ್ಲಿಯವರೆಗೆ ಲಭಿಸಿದ ಮಾಹಿತಿ ಪ್ರಕಾರ ಟಿಪ್ರಾ ಮೋಥಾ 4ಸೀಟುಗಳನ್ನು ಗೆದ್ದಿದ್ದು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಬಿಜೆಪಿ 11 ಸೀಟುಗೆದ್ದು, 22 ರಲ್ಲಿ ಮುನ್ನಡೆ ಸಾಧಿಸಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್) 1 ಸ್ಥಾನ ಗೆದ್ದಿದ್ದು, 10ರಲ್ಲಿ ಮುನ್ನಡೆ ಇದೆ. ರಾಜ್ಯದ ಬುಡಕಟ್ಟು ಬೆಲ್ಟ್‌ಗಳಲ್ಲಿ ಬಿಜೆಪಿಯ ಮತಗಳ ಪಾಲನ್ನು ಟಿಪ್ರಾ ಮೋಥಾ ಗಳಿಸಿರುವುದು ಇಲ್ಲಿ ಕಾಣಸಿಗುತ್ತದೆ.
2018 ರ ಚುನಾವಣೆಯಲ್ಲಿ, ಬಿಜೆಪಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ 10 ಸ್ಥಾನಗಳನ್ನು ಗಳಿಸಿತ್ತು ಮತ್ತು ಅದರ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (IPFT) ಎಂಟು ಸ್ಥಾನಗಳನ್ನು ಗೆದ್ದಿದ್ದು ಸಿಪಿಐ(ಎಂ) ಎರಡು ಸ್ಥಾನಗಳನ್ನು ಗೆದ್ದಿತ್ತು.
ಈ ಬಾರಿ, ದೆಬ್ಬರ್ಮಾ ಅವರ ‘ಗ್ರೇಟರ್ ಟಿಪ್ರಾಲ್ಯಾಂಡ್’ ಭರವಸೆಯೊಂದಿಗೆ ಬುಡಕಟ್ಟು ಮತದಾರರ ದೊಡ್ಡ ವರ್ಗದ ಬೆಂಬಲವನ್ನು ಸ್ಪಷ್ಟವಾಗಿ ಗೆದ್ದಿರುವ ಕಾರಣ, IPFT ಬದಲು ಟಿಪ್ರಾ ಮೋಥಾ ಅತ್ಯಂತ ಪ್ರಮುಖ ಬುಡಕಟ್ಟು ಪಕ್ಷವಾಗಿ ಹೊರಹೊಮ್ಮಿದೆ. 2018 ರ ಚುನಾವಣೆಯಲ್ಲಿ ಎಡರಂಗದ ಸರ್ಕಾರವನ್ನು ಉರುಳಿಸುವ ಹಿಂದಿನ ಪ್ರಮುಖ ಅಂಶವೆಂದರೆ IPFT ಯೊಂದಿಗಿನ ಬಿಜೆಪಿಯ ಮೈತ್ರಿಯಾಗಿತ್ತು
2018 ರ ಚುನಾವಣೆಗೆ ಮುಂಚಿತವಾಗಿ ಎದ್ದ ಜನಪ್ರಿಯ ಬೇಡಿಕೆಯಾದ ‘ಟಿಪ್ರಾಲ್ಯಾಂಡ್’ ಭರವಸೆಯನ್ನು ನೀಡಲು IPFT ವಿಫಲವಾದಾಗ, ದೆಬ್ಬರ್ಮಾ ತನ್ನ ರಾಜಮನೆತನ ಪರಂಪರೆಯನ್ನು ಬಳಸಿ ವ್ಯವಸ್ಥಿತವಾಗಿ ಬುಡಕಟ್ಟು ಜನಾಂಗದ ಜನರತ್ತ ಹೋದರು. ಕ್ರಮೇಣ, ಅವರು ಸ್ಥಳೀಯ ಜನರ ದನಿಯಾಗುವಲ್ಲಿ ಯಶಸ್ವಿಯಾದರು.ಜನರು ಅವರನ್ನು ‘ಬುಬಾಗ್ರಾ (ರಾಜ)’ ಎಂದು ಕರೆಯಲು ಪ್ರಾರಂಭಿಸಿದರು. ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಐಪಿಎಫ್‌ಟಿಯ ಪ್ರಾಬಲ್ಯ ಕಡಿಮೆಯಾಗುತ್ತಾ ಬಂತು.
2022 ರ ಏಪ್ರಿಲ್‌ನಲ್ಲಿ ರಚನೆಯಾದ ಕೇವಲ ಮೂರು ತಿಂಗಳ ನಂತರ ತ್ರಿಪುರ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ (TTAADC) ಚುನಾವಣೆಯಲ್ಲಿ IPFTಯಾವುದೇ ಸ್ಥಾನ ಗೆದ್ದಿಲ್ಲ, ಇದು ದೆಬ್ಬರ್ಮಾರ ಗೆಲುವಾಗಿತ್ತು
ಒಂದು ಕಾಲದಲ್ಲಿ ತ್ರಿಪುರಾದಲ್ಲಿ ಭದ್ರಕೋಟೆ ಹೊಂದಿದ್ದ ಸಿಪಿಐ(ಎಂ) ಕೂಡ ಟಿಪ್ರಾ ಮೋಥಾಕ್ಕೆ ತನ್ನ ಹಿಡಿತವನ್ನು ಬಿಟ್ಟುಕೊಟ್ಟಿದೆ. ಟಿಟಿಎಡಿಸಿ ಚುನಾವಣೆಯಲ್ಲಿ ಟಿಪ್ರಾ ಮೋಥಾ 18 ಸ್ಥಾನಗಳನ್ನು ಗೆದ್ದುಕೊಂಡಿದ್ದು ಬಿಜೆಪಿ ಕೇವಲ 10 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಹಲವಾರು ಪ್ರಯತ್ನಗಳ ಹೊರತಾಗಿಯೂ ಆಡಳಿತಾರೂಢ ಬಿಜೆಪಿ ಅಥವಾ ಪ್ರತಿಪಕ್ಷ ಸಿಪಿಐ(ಎಂ)ಗೆ ವಿಧಾನಸಭೆ ಚುನಾವಣೆಯಲ್ಲಿ ತಿಪ್ರಾ ಮೋಥಾದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Thu, 2 March 23