ನವದೆಹಲಿ, ಆಗಸ್ಟ್ 22: ಎಲ್ಲಾ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಚಂದ್ರಯಾನ-3 (Chandrayan-3) ಲ್ಯಾಂಡಿಂಗ್ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸುಂತೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ಸೂಚನೆ ನೀಡಿದೆ. ಆಗಸ್ಟ್ 23 ರಂದು ಸಂಜೆ 5.30 – 6.30 ರವರೆಗೆ ನಡೆಯುವ ಚಂದ್ರಯಾನ -3 ಲ್ಯಾಂಡಿಂಗ್ ವೀಕ್ಷಿಸಲು ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸಲು ಹೇಳಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತದಲ್ಲಿ ವಿಜ್ಞಾನ ಬೆಳೆದುಬಂದ ಹಾದಿಯ ಬಗ್ಗೆ ಅರಿವು ಮೂಡಿಸುವ, ಬಾಹ್ಯಾಕಾಶ ಕ್ಷೇತ್ರದ ಸಾಧನೆ ಹಾಗೂ ದೇಶದ ಸಾಧನೆಯ ಬಗ್ಗೆ ಹೆಮ್ಮೆಪಡುವಂತೆ ಮಾಡುವ ಉದ್ದೇಶ ಹೊಂದಿದೆ. ಚಂದ್ರಯಾನ-3 ಲ್ಯಾಂಡಿಂಗ್ ಐತಿಹಾಸಿಕ ಸಂದರ್ಭವಾಗಿದ್ದು, ಜನರಲ್ಲಿ ಕುತೂಹಲವನ್ನು ಹೆಚ್ಚಿಸಿದೆ, ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳಲ್ಲಿ ಹೊಸದನ್ನು ಶೋಧಿಸುವ ಮನೋಭಾವವನ್ನೂ ಬೆಳೆಸುತ್ತದೆ ಎಂದು ಯುಜಿಸಿ ಹೇಳಿದೆ.
ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರವು ಆಗಸ್ಟ್ 23 ರಂದು 5.15 ರಿಂದ 6.15ರ ವರೆಗೆ ನಡೆಯಲಿರುವ ಚಂದ್ರಯಾನದ ಲ್ಯಾಂಡಿಂಗ್ ವೀಕ್ಷಿಸಲು ಒಂದು ಗಂಟೆ ಶಾಲಾ ಅವಧಿಯನ್ನೂ ಹೆಚ್ಚಿಸಿದೆ.
ಚಂದ್ರಯಾನ -3 ಸಾಫ್ಟ್ ಲ್ಯಾಂಡಿಗ್ ಆಗಸ್ಟ್ 23ರಂದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವಾಗಲಿದೆ. ಇಸ್ರೋ ವೆಬ್ಸೈಟ್ (https://www.isro.gov.in/), ಇಸ್ರೋ ಅಧಿಕೃತ (ISRO Official) ಯೂಟ್ಯೂಬ್ ಚಾನೆಲ್, ಇಸ್ರೋ ಫೇಸ್ ಬುಕ್ (https://www.facebook.com/ISRO)ಚಾನೆಲ್ ಹಾಗೂ ಡಿಡಿ ನ್ಯಾಷನಲ್ ಚಾನೆಲ್ಗಳಲ್ಲಿ ನೇರ ಪ್ರಸಾರಗೊಳ್ಳಲಿದೆ.
ಇದನ್ನೂ ಓದಿ: ನೀಲ್ ಆರ್ಮ್ಸ್ಟ್ರಾಂಗ್ ಹೊರತುಪಡಿಸಿ ಇಲ್ಲಿಯವರೆಗೆ ಚಂದ್ರನ ಮೇಲೆ ಕಾಲಿಟ್ಟವರು ಎಷ್ಟು ಮಂದಿ?
ಚಂದ್ರಯಾನ – 3 ಲ್ಯಾಂಡ್ ಆಗುವಾಗ ವೇಗವನ್ನು 30 ಕಿ.ಮೀಗೆ ನಿಯಂತ್ರಿಸಿ, ಇಳಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಮೊದಲು ಚಂದ್ರಯಾನ -2 ಯೋಜನೆಯು ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ವಿಫಲವಾಗಿತ್ತು. ಈ ಬಾರಿ ಲ್ಯಾಂಡಿಂಗ್ ಸಂದರ್ಭದಲ್ಲಿ ಎದುರಾಗಬಹುದಾದ ಎಲ್ಲಾ ಸಮಸ್ಯೆಗಳನ್ನು ಪರೀಕ್ಷಿಸಲಾಗಿದೆ. ಲ್ಯಾಂಡಿಂಗ್ ನಂತರ ಸಂಶೋಧನಾ ಕಾರ್ಯಗಳು ಪ್ರಾರಂಭವಾಗಲಿವೆ. ಚಂದ್ರಯಾನ -3 ಚಂದ್ರನ ಸಂಯೋಜನೆ, ಇತಿಹಾಸ ಮತ್ತು ವಸ್ತು ಸ್ಥಿತಿಯನ್ನು ಅರಿಯಲು ಸಹಾಯಕವಾಗಿದೆ. ಲ್ಯಾಂಡರ್ ಮಾಡ್ಯೂಲ್ ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿಯಲಿದೆ. ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಆಗಸ್ಟ್ 23ರಂದು ಸಾಧ್ಯವಾಗದೆ ಹೋದರೆ ಅಥವಾ ಅಲ್ಲಿನ ಪರಿಸ್ಥಿತಿ ಪೂರಕವಾಗಿಲ್ಲದೆ ಇದ್ದರೆ ಲ್ಯಾಂಡಿಂಗ್ ಅನ್ನು ಆಗಸ್ಟ್ 27ಕ್ಕೆ ಮುಂದೂಡಲಾಗುತ್ತದೆ ಎಂದು ಇಸ್ತೋ ಹೇಳಿದೆ. ಚಂದ್ರಯಾನ ಬೆನ್ನಲ್ಲೇ ರಷ್ಯಾ ಕೈಗೊಂಡಿದ್ದ ಚಂದ್ರಯಾನ ನೌಕೆ ‘ಲೂನಾ’ ತಾಂತ್ರಿಕ ದೋಷದಿಂದ ಆಗಸ್ಟ್ 21 ರಂದು ಪತನಗೊಂಡಿತ್ತು.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ