ಕಲಬುರಗಿ, ಆ.18: ನಿನ್ನೆ(ಆ.17) ಕಲಬುರಗಿ(Kalburagi)ಯ ಅಶೋಕ ನಗರ ಠಾಣೆಯ ಪೊಲೀಸರು ಕಳ್ಳತನ(Theft) ಆರೋಪಿಯನ್ನು ವಿಚಾರಣೆಗೆ ಕರೆತರುತ್ತಿದ್ದರು. ಈ ವೇಳೆ ಉದಯ್ ಪಾರ್ದಿ(55) ಮೃತಪಟ್ಟಿದ್ದರು. ಬಳಿಕ ಪೊಲೀಸರು(Police) ಹೃದಯಾಘಾತದಿಂದ ಆರೋಪಿ ಸಾವನ್ನಪ್ಪಿರುವುದಾಗಿ ಹೇಳಿದ್ದರು. ಆದ್ರೆ, ಉದಯ್ನನ್ನು ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಆರೋಪ ಮಾಡಿರುವ ಕುಟುಂಬದವರು, ಈ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಮೂವರು ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು. ಇದೀಗ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನು ಉದಯ್ ಪಾರ್ದಿ 1992 ರಿಂದಲೇ ಕಳ್ಳತನದಲ್ಲಿ ತೊಡಗಿದ್ದ. ಈ ಹಿನ್ನಲೆ ಆತನ ಮೇಲೆ ಆಗಲೇ ಪೊಲೀಸರು ಎಂಓಬಿ ಸೀಟ್ ಓಪನ್ ಮಾಡಿದ್ದರು. ಕಳ್ಳತನ ಮಾಡುವುದು, ಕಳ್ಳತನ ವಸ್ತುಗಳನ್ನು ಖರೀದಿಸಿ ಮತ್ತೆ ಮಾರಾಟ ಮಾಡುತ್ತಿದ್ದ ಉದಯ್ನನ್ನು ಪೊಲೀಸರು ಬಂಧಿಸಿ ಕರೆತರುವ ವೇಳೆ ಈ ದುರ್ಘಟನೆ ನಡೆದಿದೆ. ಇದೀಗ ಈ ಕುರಿತು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ತನಿಖೆ ನಡೆಸಿದ ಮೇಲೆ ಕೊಲೆಯೋ ಅಥವಾ ಹೃದಯಾಘಾತದಿಂದ ಮೃತಪಟ್ಟಿದ್ದಾನೋ ತಿಳಿಯಲಿದೆ.
ಇದನ್ನೂ ಓದಿ:ಪ್ರತ್ಯೇಕ ಘಟನೆ: ಕಾಫಿ ಎಸ್ಟೇಟ್ ಮ್ಯಾನೇಜರ್ ಅನುಮಾನಾಸ್ಪದ ಸಾವು, ಹೆಣ್ಣು ಕೊಟ್ಟ ಮಾವನನ್ನೇ ಹತ್ಯೆಗೈದ ಅಳಿಯ
ಬೆಂಗಳೂರು: ನಿನ್ನೆ(ಆ.17) ಪುನೀತ್ ರಾಜ್ಕುಮಾರ್ ರಸ್ತೆಯ ಅಶ್ವಿನಿ ಅಪಾರ್ಟ್ಮೆಂಟ್ ಬಳಿ ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಸೈಕಲ್ ಸವಾರ ಬಲಿಯಾಗಿರುವಂತಹ ಘಟನೆ ನಡೆದಿದೆ. ಕೃಷ್ಣಾ ರೆಡ್ಡಿ ಮೃತ ಸೈಕಲ್ ಸವಾರ. ಕುಮಾರಸ್ವಾಮಿ ಲೇಔಟ್ ಕಡೆಯಿಂದ ಕತ್ರಿಗುಪ್ಪೆಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಕೃಷ್ಣಾ ರೆಡ್ಡಿ ತಲೆ, ಮುಖಕ್ಕೆ ಗಂಭೀರ ಗಾಯವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು. ಈ ಕುರಿತು ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಖಾಸಗಿ ಬಸ್ ವಶಕ್ಕೆ ಪಡೆದಿದ್ದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 am, Fri, 18 August 23