ದಾವಣಗೆರೆ, ಆಗಸ್ಟ್ 05: ಕಾಲು ಜಾರಿ ಬಿದ್ದು ನದಿಯಲ್ಲಿ ಮುಳುಗಿದ್ದರೆನ್ನಲಾದ ಪ್ರಕರಣದಲ್ಲಿ ತಾಯಿ ಮತ್ತು ಮಗಳ ದೇಹಗಳು (body found) ಶನಿವಾರ ಪತ್ತೆ ಹಚ್ಚಲಾಗಿದೆ. ಮೃತರನ್ನು ಹರಿಹರ ತಾಲ್ಲೂಕಿನ ಮಲೆಬೆನ್ನೂರು ಹೋಬಳಿಯ ಮೂಗಿನಗೊಂದಿ ಗ್ರಾಮದ ಆನಂದ ಪಾಟೀಲ್ ಎಂಬುವರ ಪತ್ನಿ ಭಾಗ್ಯಜ್ಯೋತಿ (41) ಮತ್ತು ಪುತ್ರಿ ವೇದಿಕಾ (9) ಎಂದು ಗುರುತಿಸಲಾಗಿದೆ.
ಆಗಸ್ಟ್ 3 ರಂದು ಮಧ್ಯಾಹ್ನ 3.20ರ ಸಮಯದಲ್ಲಿ ಹರಿಹರ ನಗರದ ರಾಘವೇಂದ್ರ ಮಠದ ಹಿಂಭಾಗದ ನದಿ ದಡದಲ್ಲಿ ಈ ಇಬ್ಬರು ಮುಳುಗುತ್ತಿರುವುದನ್ನು ದೂರದಲ್ಲಿದ್ದ ಮೀನುಗಾರರು ಗಮನಿಸಿದ್ದರು. ವಿಷಯ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅಂದು ಕತ್ತಲಾಗುವವರೆಗೆ ಶೋಧ ಕಾರ್ಯ ನಡೆಸಿದ್ದರೂ ತಾಯಿ, ಮಗಳು ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ: ಲಾಡ್ಜ್ನಲ್ಲಿ ಕತ್ತು ಹಿಸುಕಿ ಮಹಿಳೆಯ ಹತ್ಯೆ: ಪೊಲೀಸರಿಗೆ ಶರಣಾದ ವ್ಯಕ್ತಿ
ಆಗಸ್ಟ್ 4 ರಂದು ಬೆಳಿಗ್ಗೆ 8ಕ್ಕೆ ತಾಯಿ ಭಾಗ್ಯಜ್ಯೋತಿ ದೇಹ ರಾಘವೇಂದ್ರ ಮಠದ ಹಿಂಭಾಗದಲ್ಲಿ ಮೀನುಗಾರರಿಗೆ ಕಂಡು ಬಂದಿದ್ದು, ದೇಹವನ್ನು ದಡಕ್ಕೆ ತಂದಿದ್ದಾರೆ. ನಂತರ ಅಗ್ನಿಶಾಮಕ ದಳದ ಹರಿಹರ ಮತ್ತು ದಾವಣಗೆರೆ ತಂಡ ಜಂಟಿಯಾಗಿ ಯಾಂತ್ರೀಕೃತ ದೋಣಿಯ ಮೂಲಕ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದು ಅಂದು ಮಧ್ಯಾಹ್ನ 2.30ಕ್ಕೆ ರೈಲ್ವೆ ಸೇತುವೆ ಬಳಿ ಮಗಳು ವೇದಿಕಾ ದೇಹ ಕೂಡ ಪತ್ತೆ ಮಾಡಿದ್ದಾರೆ.
ಪತಿ ಆನಂದ ಪಾಟೀಲ್ ನೀಡಿರುವ ದೂರಿನಲ್ಲಿ ತನ್ನ ಪತ್ನಿ ಭಾಗ್ಯಜ್ಯೋತಿ ತನ್ನ ಕಣ್ಣಿನಲ್ಲಿ ಕಂಡು ಬಂದ ನೋವಿಗೆ ಚಿಕಿತ್ಸೆ ಪಡೆಯಲೆಂದು ಗ್ರಾಮದಿಂದ ಹರಿಹರದ ಆಸ್ಪತ್ರೆಗೆ ತೆರಳಿದ್ದರು. ಅಂದು ಮಧ್ಯಾಹ್ನ ನದಿ ದಡದಲ್ಲಿ ಮಂಡಕ್ಕಿ ತಿನ್ನುವಾಗ ನದಿಗೆ ಜಾರಿ ಬಿದ್ದಿದ್ದಾರೆಂದು ತಿಳಿಸಿದ್ದಾರೆ.
ಸದ್ಯ ನಗರ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿದೆ. ತಾಯಿ-ಮಗಳ ಸಾವಿನ ಸುದ್ದಿಯಿಂದ ಮೂಗಿನಗೊಂದಿ ಗ್ರಾಮಸ್ಥರು ಶೋಕದಲ್ಲಿ ಮುಳುಗಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನೈತಿಕ ಪೊಲೀಸ್ ಗಿರಿ ಪ್ರಕರಣ: ಮೂವರ ಬಂಧನ
ಗದಗ: ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ರೋಣ ತಾಲೂಕಿನ ಬೆಳವಣಕಿ ಗ್ರಾಮದ ಬಸವರಾಜ (39) ಮೃತ ದುರ್ದೈವಿ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಮಗಳೂರು: ಆಟುವಾಡುವಾಗ ನೀರಿನ ಗುಂಡಿಗೆ ಬಿದ್ದು 8 ವರ್ಷದ ಬಾಲಕ ಮೃತಪಟ್ಟಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ನಡೆದಿದೆ. ಯಾಸೀರ್(8) ಮೃತ ಬಾಲಕ. ವಸತಿ ಶಾಲೆ ಕಾಮಗಾರಿಗೆ ತೆಗೆದಿದ್ದ ನೀರಿನ ಗುಂಡಿಗೆ ಆಟವಾಡುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.
ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:51 pm, Sat, 5 August 23