ಕೊಡಗು, ಜುಲೈ 17: ಡ್ರಗ್ಸ್ ವಿರುದ್ಧ ಸಮರ ಸಾರಿದ ಕೊಡಗು (Kodagu) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 36 ಮಂದಿ ಡ್ರಗ್ ಪೆಡ್ಲರ್ಗಳು (Drug Peddlers) ಮತ್ತು ಗಾಂಜಾ ವ್ಯಸನಿಗಳನ್ನು ಬಂಧಿಸಿದ್ದಾರೆ. ಕಳದೊಂದು ವಾರದಲ್ಲಿ ಜಿಲ್ಲೆಯಲ್ಲಿ 15.9 ಕೆಜಿ ಗಾಂಜಾ ಎಂಡಿಎಂಎ ಮಾತ್ರೆ, ಎಲ್ಎಸ್ಡಿ ಸ್ಟ್ರಿಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲೆ ರಾಜ್ಯದ ಅತಿದೊಡ್ಡ ಪ್ರವಾಸೀ ಜಿಲ್ಲೆಯಾಗಿ ಬೆಳೆಯುತ್ತಿದೆ. ಮಳೆಗಾಲದಲ್ಲೂ ಜಿಲ್ಲೆಗೆ ಪ್ರವಾಸಿಗರ ಆಗಮನ ಕಡಿಮೆ ಆಗದೇ ಇರುವುದೇ ಇದಕ್ಕೆ ಉದಾಹರಣೆ. ಆದರೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಮತ್ತು ಕೊಡಗಿನ ಯುವ ಜನರನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ವ್ಯವಹಾರ ಮಾಡುತ್ತಿರುವ ಬಹುದೊಡ್ಡ ಡ್ರಗ್ಸ್ ಸಿಂಡಿಕೇಟ್ ಜಿಲ್ಲೆಯಲ್ಲಿ ಆಕ್ಟೀವ್ ಆಗಿತ್ತು.
ಈ ಬಗ್ಗೆ ರಹಸ್ಯವಾಗಿಯೇ ಕಾರ್ಯಾಚರಣೆಗೆ ಇಳಿದ ಕೊಡಗು ಜಿಲ್ಲಾ ಪೊಲಿಸರು ಕಳೆದೊಂದು ವಾರದಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. 14 ಪ್ರವಾಸಿಗರು ಸೇರಿದಂತೆ 30ಕ್ಕೂ ಅಧಿಕ ಮಂಡಿ ಡ್ರಗ್ಸ್ ಪೆಡ್ಲರ್ಗಳನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿ ಗ್ರಾಮದ ಅನಧಿಕೃತ ಹೋಂಸ್ಟೇ ಒಂದರಲ್ಲಿ 14 ಮಂದಿ ಪ್ರವಾಸಿಗರು ಡ್ರಗ್ಸ್ ಪಾರ್ಟಿ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದುಬಂದ ಹಿನ್ನೆಲೆ ಮಡಿಕೇರಿ ಪೊಲೀಸರು ದಾಳಿ ನಡೆಸಿದ್ದಾರೆ.
ಮಂಗಳೂರಿನಿಂದ ಆಗಮಿಸಿದ್ದ 14 ಮಂದಿ ಪ್ರವಾಸಿಗರು 414 ಗ್ರಾಂ ಗಾಂಜಾ ಮತ್ತು 9 ಎಲ್ಎಸ್ಡಿ ಮಾತ್ರಗೆಳನ್ನ ಬಳಸಿದ್ದು ಪತ್ತೆಯಾಗಿದೆ. ಎಲ್ಲಾ 14 ಮಂದಿ ಪ್ರವಾಸಿಗರು, ಹೋಮ್ಸ್ಟೇ ಮಾಲಿಕ ಸದಾಶಿವ ಮತ್ತು ಬ್ರೋಕರ್ ಗಣೇಶನನ್ನು ಬಂಧಿಸಲಾಗಿದೆ. ಬಂಧಿತರನ್ನು ರಿತಿಕ್, ವಿಗ್ನೇಶ್, ಅಜಿತ್ ಅಂಚನ್, ಸುಮನ್, ಚಿರಾಗ್ ಸಾನಿಲ್, ಮಂಜುನಾಥ್, ಲತೀಶ್ ನಾಯಕ್, ಸಚಿನ್, ರಾಹುಲ್, ಪ್ರಜ್ವಲ್, ಅವಿನಾಶ್, ಪ್ರತೀಕ್, ಧನುಷ್, ರಾಜೇಶ್, ದಿಲ್ ರಾಜು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಪುಷ್ಪ ಸಿನಿಮಾ ಮಾದರಿಯಲ್ಲಿ ಗಾಂಜಾ ಪೂರೈಸುತ್ತಿದ್ದ ಮೂವರು ಅರೆಸ್ಟ್, 12 ಕೋಟಿ ಮೌಲ್ಯದ ಗಾಂಜಾ ಜಪ್ತಿ
ಕೊಡಗು, ಮೈಸೂರು ಮಂಗಳೂರು ಹಾಗೂ ಕೇರಳ ರಾಜ್ಯದಲ್ಲಿ ಡ್ರಗ್ಸ್ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ ಒಡಿಸ್ಸಾ ಮೂಲದ ಸೂರ್ಯಕಾಂತ್ ಎಂಬಾತನನ್ನ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಈತ ಎಂಟು ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದ್ದಾನಂತೆ. ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿದ್ದುಕೊಂಡು ಆತ ಕಾರ್ಯಾಚರಣೆ ಮಾಡುತ್ತಿದ್ದ. ಹೈದರಾಬಾದ್ ಸೇರಿದಂತೆ ವಿವಿಧ ಕಡೆಗಳಿಂದ ಮೈಸೂರಿಗೆ ಡ್ರಗ್ಸ್ ಬರುತ್ತದೆ.
ಬಳಿಕ ಈತ ವಯಸ್ಸಾದವರನ್ನು ಮೈಸೂರಿಗೆ ಬಸ್ಸಿನಲ್ಲಿ ಕಳುಹಿಸಿ ಗಾಂಜಾ ಮತ್ತು ಡ್ರಗ್ಸ್ ಅನ್ನ ಕೊಡಗು, ಕೇರಳಕ್ಕೆ ಸಪ್ಲೈ ಮಾಡುತ್ತಿದ್ದ ಎಂದು ಕೊಡಗು ಪೊಲಿಸ್ ವರಿಷ್ಠಾಧಿಕಾರಿ ರಾಮರಾಜನ್ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಗಾಂಜಾ ಸೇವಕರಾಗಿದ್ದವರು ಕ್ರಮೇಣ ತಾವೇ ಹಣಕ್ಕಾಗಿ ಗಾಂಜಾ ಪೆಡ್ಲರ್ಗಳಾಗಿ ಬದಲಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳು, ಪ್ರವಾಸಿಗರು, ಆಟೋ ಚಾಲಕರು, ಕೂಲಿ ಕಾರ್ಮಿಕರು ಕೂಡ ಗಾಂಜಾ ವ್ಯವಹಾರದಲ್ಲಿ ತೊಡಗಿರುವ ಆತಂಕಕಾರಿ ಮಾಹಿತಿಯನ್ನು ಪೊಲಿಸರು ತಿಳಿಸಿದ್ದಾರೆ.
ಮಡಿಕೇರಿ ನಗರದ ಕನ್ನಂಡ ಬಾಣೆ ಬಳಿಯೂ ಗಾಂಜಾ ಮಾರಾಟ ಮಾಡುತ್ತಿದ್ದ ಅಲೀಂ ಅಹ್ಮದ್ ಮತ್ತು ಮೋಸಿನ್ ಎಂಬಾತನನ್ನ ಬಂಧಿಸಲಾಗಿದೆ. ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಚೆನ್ನಯ್ಯನ ಕೋಟೆ ನಿವಾಸಿ ಇಮ್ರಾನ್ ಎಂಬಾತ 190 ಗ್ರಾಂ ಗಾಂಜಾ ಮಾರಾಟಮಾಡುತ್ತಿದ್ದಾಗ ಪೊಲಿಸರ ಬಲೆಗೆ ಬಿದ್ದಿದ್ದಾನೆ. ಗೋಣಿಕೊಪ್ಪಲುವಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಶಮೀರ್, ಜಬ್ಬಾರ್, ನಿಸಾರ್ ಎಂಬುವರನ್ನ ಬಂಧಿಸಿ 370 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಡ್ರಗ್ಸ್ ದಂಧೆಕೋರರ ವಿರುದ್ಧ ಕಾರ್ಯಾಚರಣೆಗೆ ತಮಗೆ ಮಾಹಿತಿ ಮತ್ತು ಸಹಕಾರ ನೀಡುವಂತೆ ಕೊಡಗು ಜಿಲ್ಲಾ ಎಸ್ಪಿ ರಾಮರಾಜನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ಡ್ರಗ್ಸ್ ಮಾರಾಟ ಜಾಲ ಬಹಳ ಸಕ್ರಿಯವಾಗಿದೆ. ಜಿಲ್ಲೆಯ ಯುವ ಜನತೆ ಮತ್ತು ವಿದ್ಯಾರ್ಥಿಗಳು ಡ್ರಗ್ಸ್ ದಾಸರಾಗುತ್ತಿರುವುದು ತೀವ್ರ ಆತಂಕಕಕ್ಕೆಕಾರಣವಾಗಿದೆ. ಆದರೆ ತಡವಾಗಿಯಾದರೂ ಪೊಲಿಸರು ಎಚ್ಚೆತ್ತಿದ್ದು, ಡ್ರಗ್ಸ್ ಪೆಡ್ಲರ್ಗಳ ಮತ್ತು ಡ್ರಗ್ಸ್ ವ್ಯಸನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಕೊಡಗು ಪೊಲಿಸರ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಜಿಲ್ಲೆಯನ್ನ ಡ್ರಗ್ಸ್ ಮುಕ್ತ ಮಾಡುವತ್ತ ಪೊಲಿಸರು ಶ್ರಮವಹಿಸಲಿ ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ. ಪ್ರವಾಸಿ ಜಿಲ್ಲೆಯಲ್ಲಿ ಈ ರೀತಿ ಗಾಂಜಾ ಮತ್ತು ಡ್ರಗ್ಸ್ ವ್ಯವಹಾರ ನಡೆಯುತ್ತಿರುವುದು ನಾಗರಿಕ ವಲಯದಲ್ಲಿ ತೀವವ್ರ ಕಳವಳಕ್ಕೆ ಕಾರಣವಾಗಿದೆ. ಜಿಲ್ಲೆಯ ಯುವಜನತೆ ಮತ್ತು ಪ್ರವಾಸಿಗರ ಸುರಕ್ಷಿತೆಗಾಗಿ ಕಠಿಣ ಕ್ರಮಕ್ಕೆ ಮುಂದಾಗುವಂತೆ ಸಾರ್ವಜನಿಕರು ಪೊಲಿಸರನ್ನ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Mon, 17 July 23