ನವದೆಹಲಿ, ಆಗಸ್ಟ್ 24: ಭಾರತದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮೆಟೋದಿಂದ ಶುರುವಾದ ಬೆಲೆ ಏರಿಕೆ, ಈಗ ಬಹುತೇಕ ಎಲ್ಲಾ ತರಕಾರಿಗಳನ್ನೂ ದುಬಾರಿಯನ್ನಾಗಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ತರಕಾರಿ ಬೆಲೆ (Vegetable Price) ಶೇ. 37ರಷ್ಟು ಹೆಚ್ಚಿದೆ. ಟೊಮೆಟೋ ಬೆಲೆಯಂತೂ ಶೇ. 201ರಷ್ಟು ಹೆಚ್ಚಾಗಿದೆ. ಈರುಳ್ಳಿ ಬೆಲೆ ಏರತೊಡಗಿದೆ. ಈ ಆಹಾರವಸ್ತುಗಳ ಬೆಲೆ ಏರಿಕೆ ಪರಿಣಾಮ ಜುಲೈ ತಿಂಗಳಲ್ಲಿ ಹಣದುಬ್ಬರ (Inflation) ಶೇ. 7.44ರಷ್ಟು ಮಟ್ಟಕ್ಕೆ ಹೋಗಿದೆ. ಇದು ಕಳೆದ 15 ತಿಂಗಳಲ್ಲೇ ಗರಿಷ್ಠ ಹಣದುಬ್ಬರ ಎನಿಸಿದೆ. ಆರ್ಬಿಐನ ತಾಳಿಕೆ ಮಿತಿಯ ಒಳಗಿದ್ದ ಹಣದುಬ್ಬರ ಈಗ ಕೈಮೀರಿ ಹೋಗುವಂತಿದೆ. ಸರ್ಕಾರ ಇನ್ನಷ್ಟು ಹಣದುಬ್ಬರ ಹೆಚ್ಚಳ ತಪ್ಪಿಸಲು ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹಾಕಿದೆ. ಸಕ್ಕರೆ ರಫ್ತು ನಿಷೇಧಿಸುವ ಆಲೋಚನೆಯಲ್ಲಿದೆ.
ಟೊಮೆಟೋ ಇತ್ಯಾದಿ ತರಕಾರಿ ಬೆಲೆಗಳ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ತುಸು ಕೊಡುವ ಸುದ್ದಿಯನ್ನು ಆರ್ಬಿಐ ಕೊಟ್ಟಿದೆ. ಸೆಪ್ಟೆಂಬರ್ನಿಂದ ತರಕಾರಿ ಬೆಲೆಗಳು ಕಡಿಮೆ ಆಗಬಹುದು ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ: ಭಾರತದಿಂದ ಏಳು ವರ್ಷದಲ್ಲಿ ಮೊದಲ ಬಾರಿಗೆ ಸಕ್ಕರೆ ರಫ್ತು ನಿಷೇಧ ಸಾಧ್ಯತೆ
ಜುಲೈನಲ್ಲಿ ಏರತೊಡಗಿದ ತರಕಾರಿ ಬೆಲೆಗಳು ಕಡಿಮೆ ಆಗತೊಡಗಿವೆ. ಹೊಸ ತರಕಾರಿ ಆವಕದಿಂದ ಬೆಲೆ ಕಡಿಮೆ ಆಗುತ್ತಿದೆ. ಈರುಳ್ಳಿ ಬೆಲೆ ಕೈಮೀರಿ ಹೋಗುವ ಮುನ್ನ ತಹಬದಿಗೆ ತರಲಾಗುತ್ತಿದೆ. ಸೆಪ್ಟಂಬರ್ನಿಂದ ತರಕಾರಿ ಹಣದುಬ್ಬರ ಸಾಕಷ್ಟು ಕಡಿಮೆ ಆಗಬಹುದು ಎಂದು ನಿರೀಕ್ಷಿಸಿದ್ದೇವೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಆಗಸ್ಟ್ 23ರಂದು ಹೇಳಿದ್ದಾರೆ.
ಜಾಗತಿಕ ರಾಜಕೀಯ ಬಿಕ್ಕಟ್ಟುಗಳಿಂದಾಗಿ ಆಹಾರ ಬೆಲೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದ್ದರೂ ಬೇಳೆ ಕಾಳುಗಳ ಬೆಲೆ ನಿಯಂತ್ರಣದಲ್ಲಿ ಇರುವ ಸಾಧ್ಯತೆ ಇದೆ. ಆದರೆ, ಆಹಾರ ವಸ್ತು ಬೆಲೆ ಏರಿಕೆಯ ಬಿಸಿ ಪದೇ ಪದೇ ತಾಕುತ್ತಿರುವುದರಿಂದ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತಿದೆ. ನಾವು ಈ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ