2022ರ ಏಪ್ರಿಲ್ನಲ್ಲಿ ಚಿಲ್ಲರೆ ಹಣದುಬ್ಬರ ದರ (Retail Inflation) 8 ವರ್ಷಗಳ ಗರಿಷ್ಠ ಮಟ್ಟವಾದ ಶೇ 7.79 ಮುಟ್ಟಿದೆ. ಮುಂದುವರಿದ ಆಹಾರ ಬೆಲೆಗಳ ಏರಿಕೆ, ಹೆಚ್ಚಿನ ಇನ್ಪುಟ್ ವೆಚ್ಚದ ಕಾರಣಕ್ಕೆ ತಮ್ಮ ಉತ್ಪನ್ನಗಳ ಬೆಲೆ ಏರಿಕೆ ಮಾಡಲೇಬೇಕಿದೆ. ಕೆಲವು ಸಂಸ್ಥೆಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಬೇರೆ ದಾರಿಗಳನ್ನು ಕಂಡುಕೊಂಡಿವೆ. ತೂಕ ಹಗುರ ಮಾಡುವುದು ಅಥವಾ ವಸ್ತುಗಳ ಮರುಬಳಕೆ ಮೂಲಕ ಕಚ್ಚಾ ವಸ್ತುಗಳ ಹೆಚ್ಚಿನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುತ್ತಿವೆ. ಗೃಹಬಳಕೆ ವಸ್ತುಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ಗಳು, ಟೀವಿ, ವಾಷಿಂಗ್ ಮಶೀನ್ ಮತ್ತು ರೆಫ್ರಿಜರೇಟರ್ ಉತ್ಪಾದಕರು ಮೇ ಕೊನೆಯಿಂದ ಅಥವಾ ಜೂನ್ ಮೊದಲ ವಾರದಲ್ಲಿ ಉತ್ಪನ್ನಗಳ ಬೆಲೆಯನ್ನು ಶೇ 3ರಿಂದ 5ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಇನ್ಪುಟ್ ವೆಚ್ಚವನ್ನು ಖರೀದಿದಾರರಿಗೆ ದಾಟಿಸುವ ಉದ್ದೇಶ ಇದಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದುರ್ಬಲ ಆಗುತ್ತಿರುವುದು ಸಹ ಪರಿಣಾಮ ಬೀರುತ್ತಿದೆ. ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಅಂಡ್ ಅಪ್ಲೈಯನ್ಸಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (CEAMA) ಪ್ರಕಾರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಸಹ ವರದಿ ಪ್ರಕಾರ ಹೆಚ್ಚು ಸಮಸ್ಯೆ ಮಾಡುತ್ತಿದೆ. “ಜೂನ್ನಿಂದ ನಾವು ಶೇ 3ರಿಂದ 5ರಷ್ಟು ದರ ಏರಿಕೆ ನಾವು ಖಂಡಿತಾ ನೋಡಲಿದ್ದೇವೆ,” ಎಂದು CEAMA ಅಧ್ಯಕ್ಷರಾದ ಎರಿಕ್ ಬ್ರಗಂಜಾ ಹೇಳಿದ್ದಾರೆ ಎಂದು ಪಿಟಿಐ ತಿಳಿಸಿದೆ. ಗುರುವಾರದಂದು ಡಾಲರ್ ವಿರುದ್ಧ ರೂಪಾಯಿ ಮೌಲ್ಯ 77.63ಕ್ಕೆ, ಅಂದರೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಆದರೆ ಶುಕ್ರವಾರ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದು, 77.36ರಲ್ಲಿ ವಹಿವಾಟು ನಡೆಸಿತು.
ಈಚೆಗೆ ಹಿಂದೂಸ್ತಾನ್ ಯುನಿಲಿವರ್ ವಿವಿಧ ಉತ್ಪನ್ನಗಳ ಬೆಲೆಯನ್ನು ಶೇ 15ರ ತನಕ ಹೆಚ್ಚಿಸಿದೆ. ಸನ್ಸಿಲ್ಕ್ ಶಾಂಪೂ ಎಲ್ಲ ವೇರಿಯಂಟ್ನಲ್ಲಿ ರೂ. 8ರಿಂದ 10ರಷ್ಟು ಏರಿಕೆಯಾಗಿದೆ. 100 ಎಂಎಲ್ ಕ್ಲಿನಿಕ್ ಪ್ಲಸ್ ಶಾಂಪೂ ಶೇ 15ರಷ್ಟು ದುಬಾರಿಯಾಗಿದೆ. 125 ಗ್ರಾಮ್ ಪಿಯರ್ಸ್ ಸೋಪ್ ಬೆಲೆ ಶೇ 2.4ರಷ್ಟು ಹೆಚ್ಚಾಗಿದ್ದಲ್ಲಿ, ಮಲ್ಟಿಪ್ಯಾಕ್ ಶೇ 3.7ರಷ್ಟು ಜಾಸ್ತಿಯಾಗಿದೆ.
ಸಿಪಿಐ ಆಧಾರಿತ ಹಣದುಬ್ಬರ ಮಾರ್ಚ್ ತಿಂಗಳಲ್ಲಿ ಶೇ 6.95ರಷ್ಟಿತ್ತು. ಕಳೆದ ವರ್ಷ ಏಪ್ರಿಲ್ನಲ್ಲಿ ಇದು ಶೇ 4.23ರಷ್ಟಿತ್ತು. ಆಹಾರ ಬ್ಯಾಸ್ಕೆಟ್ನ ಹಣದುಬ್ಬರ ಏಪ್ರಿಲ್ನಲ್ಲಿ ಶೇ 8.38ಕ್ಕೆ ಏರಿತ್ತು. ಅದರ ಹಿಂದಿನ ತಿಂಗಳು ಶೇ 7.68ರಷ್ಟಿತ್ತು. ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಶೇ 1.96ರಷ್ಟಿತ್ತು.
ಈ ಮಧ್ಯೆ, ಕಂಪೆನಿಗಳು ಉತ್ಪನ್ನಗಳ ಬೆಲೆ ಇಳಿಸದೆ ತೂಕವನ್ನು ಕಡಿಮೆ ಮಾಡುತ್ತಿದೆ. ಇನ್ಪುಟ್ ವೆಚ್ಚಗಳ ಹೆಚ್ಚಳವನ್ನು ಸರಿತೂಗಿಸಲು ಹೀಗೆ ಮಾಡಲಾಗುತ್ತಿದೆ. ಹೆಚ್ಚುತ್ತಿರುವ ಖಾದ್ಯ ತೈಲ, ಧಾನ್ಯ ಮತ್ತು ಇಂಧನ ಬೆಲೆ ಹಿನ್ನೆಲೆಯಲ್ಲಿ ಯುನಿಲಿವರ್ ಪಿಎಲ್ಸಿ ಭಾರತ ಘಟಕ, ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಡಾಬರ್ ಇಂಡಿಯಾದಿಂದ ಕಡಿಮೆ ಬೆಲೆಯ ಪ್ಯಾಕೇಜ್ಗಳಿಗೆ ಹಗುರವಾದ ಪದಾರ್ಥಗಳ ಕಡೆಗೆ ಸಾಗಿದ್ದಾರೆ.
ಉದಾಹರಣೆಗೆ, ವಿಮ್ ಸೋಪ್ 135 ಗ್ರಾಮ್ ಬೆಲೆ 10 ರೂಪಾಯಿ. ಮೂರು ತಿಂಗಳ ಹಿಂದೆ ಇದು 155 ಗ್ರಾಮ್ ಇತ್ತು ಎಂದು ವಿತರಕರು ಹೇಳುತ್ತಾರೆ. ಇದೇ ಬೆಲೆಯಲ್ಲಿ ಹಲ್ದಿರಾಮ್ ಆಲೂ ಭುಜಿಯಾ ಪ್ಯಾಕೆಟ್ 55 ಗ್ರಾಮ್ ಇದ್ದದ್ದು 42 ಗ್ರಾಮ್ಗೆ ಕುಸಿದಿದೆ ಎಂದು ರೀಟೇಲರ್ಗಳು ಹೇಳುತ್ತಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆಗಾಗಿ ಮಾಡಿದ ಇಮೇಲ್ಗೆ ಯುನಿಲಿವರ್ ಮತ್ತು ಹಲ್ದಿರಾಮ್ನ ಸಂಪರ್ಕಿಸಿದಾಗ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: WPI Based Inflation: ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಮಾರ್ಚ್ನಲ್ಲಿ 4 ತಿಂಗಳ ಗರಿಷ್ಠ ಮಟ್ಟವಾದ ಶೇ 14.55ಕ್ಕೆ
Published On - 6:54 pm, Fri, 13 May 22