ಮ್ಯೂಚುವಲ್ ಫಂಡ್ ಮೂಲಕವೋ ಅಥವಾ ನೇರವಾಗಿಯೋ ಷೇರುಪೇಟೆಯಲ್ಲಿ ಹೂಡಿಕೆ (share investments) ಮಾಡುವ ಬಹಳ ಮಂದಿ ಮಾರುಕಟ್ಟೆಯ ಏರಿಳಿತದಿಂದ ಪ್ರಭಾವಿತಗೊಳ್ಳುತ್ತಾರೆ. ತಾವು ಮಾಡಿರುವ ಹೂಡಿಕೆ ಎಷ್ಟು ವೇಗದಲ್ಲಿ ಬೆಳೆಯುತ್ತದೆ ಎಂದು ಪ್ರತೀ ದಿನವೂ ಅವಲೋಕಿಸುವವರಿದ್ದಾರೆ. ಅಂತೆಯೇ, ಮ್ಯೂಚುವಲ್ ಫಂಡ್ಗಳಿಂದ ಒಂದು ಅಥವಾ ಎರಡು ವರ್ಷದೊಳಗೆ ಹೂಡಿಕೆ ಹಿಂಪಡೆಯುವವರು ಅಥವಾ ಫಂಡ್ ಬದಲಿಸುವವರೇ ಹೆಚ್ಚು. ಆದರೆ, ಷೇರುಪೇಟೆ ತಜ್ಞರ ಪ್ರಕಾರ ಇಂಥ ಆತುರದ ಪ್ರವೃತ್ತಿಯಿಂದ ಏನೂ ಪ್ರಯೋಜನ ಇರುವುದಿಲ್ಲ. ಮಾರುಕಟ್ಟೆ ಏರಿಳಿತಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೇ ದೀರ್ಘಕಾಲೀನವಾಗಿ ಹೂಡಿಕೆ ಮಾಡುವುದು ಉತ್ತಮ ನಡೆ ಎನ್ನಲಾಗುತ್ತದೆ.
ತಕ್ಕಮಟ್ಟಿಗೆ ಉತ್ತಮ ಎನಿಸುವ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡಿಕೊಂಡು ಎಸ್ಐಪಿ ಮೂಲಕ ದೀರ್ಘಕಾಲ ಹೂಡಿಕೆ ಮಾಡುವುದರಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಸಂಪತ್ತುವೃದ್ಧಿ ಕಾಣಬಹುದು. ಇನ್ಷೂರೆನ್ಸ್ ಪಾಲಿಸಿಗೆ ಕಣ್ಮುಚ್ಚಿ ನಿಯಮಿತವಾಗಿ ಹೂಡಿಕೆ ಮಾಡುವ ರೀತಿಯಲ್ಲೇ ಮ್ಯೂಚುವಲ್ ಫಂಡ್ ಎಸ್ಐಪಿಗೂ ಬದ್ಧತೆ ಹೊಂದಿರಬೇಕು. ಪ್ರತೀ ತಿಂಗಳೂ ತಮ್ಮ ಆದಾಯದಲ್ಲಿ ನಿರ್ದಿಷ್ಟ ಭಾಗವನ್ನು ಹಲವು ವರ್ಷಗಳ ಕಾಲ ಎಸ್ಐಪಿಗೆ ಹಾಕುತ್ತಾ ಹೋದಲ್ಲಿ ನೀವೇ ಅಚ್ಚರಿಪಡುವಷ್ಟು ಹೂಡಿಕೆ ಬೆಳೆದಿರುತ್ತದೆ.
ದೀರ್ಘಕಾಲದ ನಿಯಮಿತ ಹೂಡಿಕೆಯಿಂದ ಹಣ ಬೆಳೆಯುವುದರ ಹಿಂದೆ ಪವರ್ ಆಫ್ ಕಾಂಪೌಂಡಿಂಗ್ ಎಂಬ ಮ್ಯಾಜಿಕ್ ಪವರ್ ಕೆಲಸ ಮಾಡುತ್ತದೆ. ನಿಮ್ಮ ಹೂಡಿಕೆ ಹಂತ ಹಂತವಾಗಿ ವೇಗ ವೃದ್ಧಿಸಿಕೊಂಡು ಬೆಳೆಯುತ್ತಾ ಹೋಗುತ್ತದೆ. ಆದರೆ, ಬಹಳ ಸಂಯಮ ಬೇಕು. ಮೊದಲ ಏಳೆಂಟು ವರ್ಷ ನಿಮಗೆ ಅಷ್ಟು ವೃದ್ಧಿ ಕಂಡಂತೆ ಅನಿಸುವುದಿಲ್ಲ. ಆಗ ನೀವು ಸಂಯಮ ಕಳೆದುಕೊಂಡು ಫಂಡ್ನಿಂದ ಹಿಂದಕ್ಕೆ ಸರಿದರೆ ಉಪಯೋಗವಿಲ್ಲ. ಹೂಡಿಕೆಯನ್ನು ಇನ್ನೂ ಮುಂದುವರಿಸುತ್ತಾ ಹೋದರೆ ಮ್ಯಾಜಿಕ್ ಶುರುವಾಗುತ್ತದೆ. ನಿಮ್ಮ ಹೂಡಿಕೆ ಅಥವಾ ಆದಾಯ ದ್ವಿಗುಣಗೊಳ್ಳುವ ಕಾಲಾವಧಿ ಕಡಿಮೆ ಆಗುತ್ತಲೇ ಹೋಗುತ್ತದೆ.
ಇದನ್ನೂ ಓದಿ: ಸಾಲ ನೀಡಿ ಶೂಲಕ್ಕೇರಿಸುವ ಲೋನ್ ಆ್ಯಪ್ಗಳನ್ನು ಕಂಡುಹಿಡಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಇದಕ್ಕೆ ಉದಾಹರಣೆ ಎಂಬಂತೆ ನೀವು ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ತಿಂಗಳಿಗೆ 30,000 ರೂನಂತೆ ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆ ಫಂಡ್ ನಿಮಗೆ ವರ್ಷಕ್ಕೆ ಶೇ. 12ರಷ್ಟು ಲಾಭ ತಂದುಕೊಡುತ್ತದೆ ಎಂದು ಅಂದಾಜು ಮಾಡಿಕೊಳ್ಳಿ. ಅದೇ ರೀತಿ ಆದಲ್ಲಿ 50 ಲಕ್ಷ ರೂ ಸಂಪತ್ತು ಶೇಖರಣೆ ಆಗಲು 8 ವರ್ಷ ಬೇಕಾಗುತ್ತದೆ.
ಮುಂದಿನ 50 ಲಕ್ಷ ರೂ ಸಂಪತ್ತು ಸೇರಲು ಕೇವಲ 4 ವರ್ಷ ಸಾಕು. ನಂತರದ 50 ಲಕ್ಷಕ್ಕೆ 3 ವರ್ಷ ಬೇಕು. 20ನೇ ವರ್ಷಕ್ಕೆ ಬರುವಷ್ಟರಲ್ಲಿ ಪ್ರತೀ ವರ್ಷವೂ 50 ಲಕ್ಷ ರೂ ಸೇರ್ಪಡೆಯಾಗುತ್ತಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ