ಸಾಲವೆಂಬ ಶೂಲಕ್ಕೆ ಏರಿಬಿಟ್ಟೀರಿ ಜೋಕೆ..! ಇಲ್ಲಿದೆ ಸಾಲಮುಕ್ತರನ್ನಾಗಿಸುವ ಟಿಪ್ಸ್
How To Come Out of Debt Trap: ನಮ್ಮ ಹಣಕಾಸು ಅಶಿಸ್ತಿನಿಂದಲೋ, ಅನಿರೀಕ್ಷಿತ ಸಂದರ್ಭಗಳಿಂದಲೋ ನಾವು ಸಾಲಗಳಿಗೆ ಸಿಲುಕಿಬಿಡುವುದುಂಟು. ಈ ಸಾಲಗಳಿಂದ ನೀವು ಬೇಗ ಮುಕ್ತರಾಗದಿದ್ದಲ್ಲಿ ಬಲೆಗೆ ಬಿದ್ದ ಪ್ರಾಣಿಯಂತಾಗಬೇಕಾಗುತ್ತದೆ. ಸಾಲದ ಸಿಕ್ಕುಗಳಿಂದ ಬಿಡಿಸಿಕೊಳ್ಳುವ ತಂತ್ರ ಇಲ್ಲಿದೆ.
ಸಾಲ ಎನ್ನುವುದು ಶೂಲ (Debt Trap) ಇದ್ದಂತೆ. ಬಲೆಗೆ ಬಿದ್ದ ಪ್ರಾಣಿಯಂತೆ ವಿಲವಿಲ ಒದ್ದಾಡುವಂತಾಗುತ್ತದೆ. ಸಾಲ ಕಡಿಮೆ ಆಗುವ ಬದಲು ಹೆಚ್ಚುತ್ತಲೇ ಹೋಗಿ ಹತಾಶೆಗೊಳಿಸುತ್ತದೆ. ಇದು ವೈಯಕ್ತಿಕವಾಗಿಯೂ ಹೌದು, ಕೌಟುಂಬಿಕವಾಗಿಯೂ ಹೌದು ಮತ್ತು ವ್ಯಾವಹಾರಿಕವಾಗಿಯೂ ಹೌದು. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಮಾತು ಕೇಳಿ ಸಾಲ ಮಾಡುತ್ತಾ ಹೋದರೆ ಬೇರೇನಾದರೂ ತಿನ್ನಬೇಕಾದೀತು. ಕ್ರೆಡಿಟ್ ಕಾರ್ಡ್ ಇದೆ ಎಂದು ನಾವು ಅನಗತ್ಯವಾಗಿ ಶಾಪಿಂಗ್ ಮಾಡಿ ಹೆಚ್ಚುವರಿ ಸಾಲ ಮಾಡಿಕೊಳ್ಳಬಹುದು. ಅನಿರೀಕ್ಷಿತ ವೈದ್ಯಕೀಯ ವೆಚ್ಚ ಎದುರಾಗಿ ಸಾಲವಾಗಬಹುದು. ಹೊಸ ವಾಹನವೋ ಮತ್ಯಾವುದೋ ಖರೀದಿಸಿ ಸಾಲ ಆಗಬಹುದು. ಏನೇ ಇದ್ದರೂ ಸಾಲ ತೀರಿಸುವುದು ನಿಮಗೆ ಮೊದಲ ಆದ್ಯತೆ ಆಗಬೇಕು. ನಿಮ್ಮ ಗುರಿ ಯಾವತ್ತೂ ವಾಸ್ತವಿಕ ಲೆಕ್ಕಾಚಾರದಲ್ಲಿರಲಿ.
ಸಾಲ ಕ್ರೋಢೀಕರಿಸಿ
ನಿಮ್ಮಲ್ಲಿ ಸಣ್ಣ ಪುಟ್ಟ ಪ್ರಮಾಣದ ಹಲವು ಸಾಲಗಳಿದ್ದರೆ ಸುಮ್ಮನೆ ಗೊಂದಲವಾಗಬಹುದು. ಸಾಲ ತೀರಿಸಲು ಸರಿಯಾಗಿ ಗಮನ ಕೊಡಲು ಸಾಧ್ಯವಾಗದೇ ಹೋಗಬಹುದು. ಕ್ರೆಡಿಟ್ ಕಾರ್ಡ್ ಸಾಲವೇ ಆಗಲೀ ಯಾವುದೇ ಸಾಲ ಬಾಕಿ ಇದ್ದರೂ ಅಷ್ಟನ್ನೂ ತೀರಿಸುವಷ್ಟು ಒಂದೇ ಒಂದು ದೊಡ್ಡ ಸಾಲ ಮಾಡುವುದು ಉತ್ತಮ. ಇದರಿಂದ ಒಂದೇ ಸಾಲದತ್ತ ಗಮನ ಹರಿಸಿ ಬೇಗನೇ ತೀರಿಸಬಹುದು.
ಹೆಚ್ಚು ಬಡ್ಡಿ ಇರುವ ಸಾಲ ತೀರಿಸಲು ಮೊದಲ ಆದ್ಯತೆ
ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ಸಾಲಗಳಿದ್ದರೆ, ಹೆಚ್ಚು ಬಡ್ಡಿಯ ಸಾಲ ತೀರಿಸಲು ಮೊದಲ ಆದ್ಯತೆ ಕೊಡಬೇಕು. ಇದರಿಂದ ಅನಗತ್ಯವಾಗಿ ಹೆಚ್ಚು ಬಡ್ಡಿ ಕಟ್ಟುವುದನ್ನು ತಪ್ಪಿಸಿಕೊಳ್ಳಬಹುದು.
ಕ್ರೆಡಿಟ್ ಕಾರ್ಡ್ ಸಾಲ ಇದ್ದರೆ ಹೆಚ್ಚು ಬಡ್ಡಿ ಇರುವ ಕಾರ್ಡ್ನಿಂದ ಕಡಿಮೆ ಬಡ್ಡಿಯ ಕಾರ್ಡ್ಗೆ ಹಣ ವರ್ಗಾಯಿಸುವ ಅವಕಾಶ ಇದ್ದರೆ ಬಳಸಿಕೊಳ್ಳಿ.
ಬಜೆಟ್ ತಯಾರಿಸಿ
ನಿಮ್ಮ ನಿಯಮಿತ ಆದಾಯದ ಹಣ ಎಲ್ಲೆಲ್ಲಿ, ಎಷ್ಟೆಷ್ಟು ಖರ್ಚಾಗುತ್ತೆ ಎಂಬುದನ್ನು ಕಂಡುಕೊಳ್ಳಿ. ಅದಕ್ಕೆ ನಿತ್ಯ ನಿಮ್ಮ ಆದಾಯ ಮತ್ತು ವೆಚ್ಚವನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಇದರಿಂದ ವೆಚ್ಚ ಕಡಿತ ಮಾಡುವುದು ಸುಲಭವಾಗುತ್ತದೆ. ಹಾಗೆಯೇ, ಸಾಲ ಸೇರಿದಂತೆ ಅನಿವಾರ್ಯ ವೆಚ್ಚಗಳ ಪಟ್ಟಿ ಮಾಡಿ ಅದಕ್ಕೆ ಹಣ ಮುಡಿಪಾಗಿಡಿ. ಹೀಗೆ ನಿಮ್ಮದೇ ಒಂದು ಪ್ರತ್ಯೇಕ ಮಾಸಿಕ ಮತ್ತು ವಾರ್ಷಿಕ ಬಜೆಟ್ಗಳನ್ನು ರೂಪಿಸಿ.
ತುರ್ತು ನಿಧಿ ಸ್ಥಾಪಿಸಿ
ಸಾಮಾನ್ಯವಾಗಿ ನಾವು ಸಾಲದ ಶೂಲಕ್ಕೆ ಸಿಲುಕುವುದು ಅನಿರೀಕ್ಷಿತ ವೆಚ್ಚಗಳ ಎದುರಾದಾಗ. ಇದಕ್ಕೆಂದು ನೀವು ಎಮರ್ಜೆನ್ಸಿ ಫಂಡ್ ಎತ್ತಿಡುವುದು ಬಹಳ ಮುಖ್ಯ. ನಿಮ್ಮ ಆದಾಯದಲ್ಲಿ ಒಂದು ಸಣ್ಣ ಪಾಲನ್ನು ಪ್ರತೀ ತಿಂಗಳೂ ಈ ತುರ್ತುನಿಧಿಗೆ ಸೇರಿಸುತ್ತಾ ಹೋಗಿ. ನಿಮ್ಮ ಒಂದು ತಿಂಗಳ ವೆಚ್ಚ ಎಷ್ಟಿದೆಯೋ ಅದಕ್ಕಿಂತ ಆರು ಪಟ್ಟು ಹೆಚ್ಚು ಹಣವು ಈ ತುರ್ತು ನಿಧಿಯಲ್ಲಿರಲಿ.
ಇದನ್ನೂ ಓದಿ: 20 ವರ್ಷದಲ್ಲಿ 10 ಕೋಟಿ ರೂ ಸಂಗ್ರಹಿಸಲು ಎಷ್ಟು ಹಣ ಉಳಿಸಿ, ಹೂಡಿಕೆ ಮಾಡಬೇಕು? ಇಲ್ಲಿದೆ ವಿವರ
ನೀವು ಏನೇ ಹೂಡಿಕೆ ಮಾಡಬೇಕೆಂದಿದ್ದರೂ ಮೊದಲು ಸಾಲಮುಕ್ತರಾಗುವುದು ಮುಖ್ಯ. ಸಾಲಕ್ಕೆ ನೀವು ಶೇ. 10ರಿಂದ ಶೇ. 20ರಷ್ಟು ಬಡ್ಡಿ ಕಟ್ಟುತ್ತೀರಿ. ಆದರೆ, ಮ್ಯುಚುವಲ್ ಫಂಡ್ ಇತ್ಯಾದಿಯಿಂದ ಸರಾಸರಿಯಾಗಿ ನಾವು ಶೇ. 12ರಷ್ಟು ಲಾಭ ನಿರೀಕ್ಷಿಸಬಹುದು. ಹೀಗಾಗಿ, ಸಾಲ ಇಟ್ಟುಕೊಂಡು ನೀವು ಹೂಡಿಕೆ ಮಾಡುವುದು ಸಮಂಜಸ ಎನಿಸುವುದಿಲ್ಲ.
ವೃತ್ತಿಪರರ ಸಲಹೆ ಪಡೆಯಿರಿ
ನಿಮ್ಮ ಹಣಕಾಸು ಪರಿಸ್ಥಿತಿ ಮತ್ತು ಸಾಲಗಳು ಸಂಕೀರ್ಣತೆಯಿಂದ ಕೂಡಿದ್ದರೆ ವೃತ್ತಿಪರ ಸಲಹೆಗಾರರೊಬ್ಬರ ಸಹಾಯ ಪಡೆಯುವುದು ಉತ್ತಮ. ನಿಮಗೆ ಕಡಿಮೆ ಬಡ್ಡಿದರದಲ್ಲಿ ಹೊಸ ಸಾಲ ಪಡೆದು ಹಳೆಯ ಸಾಲ ತೀರಿಸಲು ದಾರಿ ಸಿಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ