ತುರ್ತು ಅಗತ್ಯ ಇದ್ದಾಗ ಸುಲಭ ಸಾಲಕ್ಕಾಗಿ ಹಲವು ಆಯ್ಕೆಗಳಿವೆ. ಪರ್ಸನಲ್ ಲೋನ್ ಪಡೆಯಬಹುದು. ಚಿನ್ನ, ಇನ್ಷೂರೆನ್ಸ್, ಬಾಂಡ್ ಇತ್ಯಾದಿ ಅಸ್ತಿಗಳ (Asset Loan) ಮೇಲೆ ಸಾಲ ಇನ್ನೂ ಸುಲಭವಾಗಿ ಸಿಗುತ್ತದೆ. ಈ ಪಟ್ಟಿಗೆ ಫಿಕ್ಸೆಡ್ ಡೆಪಾಸಿಟ್ (FD) ಸೇರುತ್ತದೆ. ಗೋಲ್ಡ್ ಲೋನ್ಗಿಂತಲೂ ಸುಲಭವಾಗಿ ಮತ್ತು ಕಡಿಮೆ ಬಡ್ಡಿದರದಲ್ಲಿ ಎಫ್ಡಿ ಮೇಲೆ ಸಾಲ ಸಿಗುತ್ತದೆ ಎಂಬುದು ಗಮನಾರ್ಹ. ಆದರೆ, ಈ ಎಫ್ಡಿ ಸಾಲ ಪಡೆಯಬೇಕಾದರೆ ನೀವು ಬ್ಯಾಂಕ್ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿರಬೇಕು. ತುರ್ತು ಹಣ ಬೇಕಾದಾಗ ಎಫ್ಡಿ ಹಿಂಪಡೆಯದೆಯೇ ನೀವು ಅದರ ಮೇಲೆ ಸಾಲ ಪಡೆಯಬಹುದು.
ಹೆಚ್ಚು ಅರ್ಜಿ ಭರ್ತಿ ಮಾಡುವ ಅವಶ್ಯತೆ ಇಲ್ಲದೇ ಬಹಳ ಸುಲಭ ಪ್ರಕ್ರಿಯೆಯಲ್ಲಿ ಬೇಗನೇ ಎಫ್ಡಿ ಸಾಲ ಪಡೆಯಲು ಸಾಧ್ಯ. ಗೋಲ್ಡ್ ಲೋನ್ನಂತೆ ಎಫ್ಡಿ ಸಾಲದಲ್ಲೂ ಮರುಪಾವತಿ ಕಾರ್ಯ ಸುಲಭವಾಗಿರುತ್ತದೆ. ತಮ್ಮಿಚ್ಛೆಯ ಪ್ರಕಾರ ಸಾಲದ ಮರುಪಾವತಿ ಮಾಡಬಹುದು.
ನಿಮ್ಮ ಫಿಕ್ಸೆಡ್ ಡೆಪಾಸಿಟ್ನ ಒಟ್ಟು ಮೊತ್ತದ ಶೇ. 70ರಿಂದ 90 ಭಾಗದ ಹಣವನ್ನು ಸಾಲವಾಗಿ ಕೊಡಲಾಗುತ್ತದೆ. ಇದಕ್ಕೆ ಇರುವ ಬಡ್ಡಿದರ ಗೋಲ್ಡ್ ಲೋನ್ನದಕ್ಕಿಂತಲೂ ಬಹಳ ಕಡಿಮೆ. ಪರ್ಸನಲ್ ಲೋನ್ಗಿಂತಲೂ ತೀರಾ ಕಡಿಮೆ ಇರುತ್ತದೆ. ಎಫ್ಡಿ ಸಾಲವು ಸುರಕ್ಷಿತ ಸಾಲದ ವರ್ಗಕ್ಕೆ ಸೇರಿರುವುದರಿಂದ ಬಡ್ಡಿದರ ಕಡಿಮೆ ಇರುತ್ತದೆ.
ಇದನ್ನೂ ಓದಿ: ಹೂಡಿಕೆ ಟಿಪ್ಸ್; 1 ಕೋಟಿ ಸಂಪತ್ತು ಸಂಗ್ರಹಕ್ಕೆ 15X15X15 ಸೂತ್ರ
ಫಿಕ್ಸೆಡ್ ಡೆಪಾಸಿಟ್ ಲೋನ್ ಪಡೆಯಲು ಮೂರು ಮಾರ್ಗಗಳಿವೆ. ಡಿಮ್ಯಾಂಡ್ ಲೋನ್, ಓವರ್ಡ್ರಾಫ್ಟ್ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಆಧಾರಿತ ಸಾಲ. ಈ ಮೂರು ರೀತಿಯ ಎಫ್ಡಿ ಸಾಲದ ವಿವರ ಇಲ್ಲಿದೆ…
ಡಿಮ್ಯಾಂಡ್ ಲೋನ್: ಇಲ್ಲಿ ಸಾಲ ಪಡೆದವರು ಎಫ್ಡಿ ಮೆಚ್ಯೂರಿಟಿ ಅವಧಿಯೊಳಗೆ ತೀರಿಸಬೇಕು. ಒಂದು, ಎರಡು, ಮೂರು, ಹೀಗೆ ಎಷ್ಟು ಕಂತುಗಳಲ್ಲಿ ಬೇಕಾದರೂ ಸಾಲದ ಮರುಪಾವತಿ ಮಾಡಬಹುದು. ಬಹಳ ಸರಳವಾದ ವ್ಯವಸ್ಥೆ ಇದು.
ಇದನ್ನೂ ಓದಿ: Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ
ಓವರ್ ಡ್ರಾಫ್ಟ್: ನಿಶ್ಚಿತ ಠೇವಣಿಗಳ ಮೇಲೆ ಬ್ಯಾಂಕುಗಳು ಓವರ್ಡ್ರಾಫ್ಟ್ ಸೌಲಭ್ಯ ಕೊಡಬಹುದು. ಡೆಪಾಸಿಟ್ನ ಶೇ. 95ರಷ್ಟು ಮೊತ್ತದವರೆಗೂ ಕ್ರೆಡಿಟ್ ಲಿಮಿಟ್ ಕೊಡಬಹುದು. ಈ ಕ್ರೆಡಿಟ್ ಲಿಮಿಟ್ನೊಳಗೆ ನೀವು ಎಷ್ಟು ಬೇಕಾದರೂ ಹಣ ವಿತ್ಡ್ರಾ ಮಾಡಬಹುದು. ನೀವು ಹಿಂಪಡೆದ ಹಣಕ್ಕೆ ಮಾತ್ರವೇ ಬಡ್ಡಿ ಅನ್ವಯ ಆಗುತ್ತದೆ.
ಕ್ರೆಡಿಟ್ ಕಾರ್ಡ್ ಆಧಾರಿತ ಸಾಲ: ಫಿಕ್ಸೆಡ್ ಡೆಪಾಸಿಟ್ ಸಾಲಕ್ಕೆ ಕ್ರೆಡಿಟ್ ಕಾರ್ಡ್ ಅವಕಾಶವೂ ಇರುತ್ತದೆ. ಓವರ್ಡ್ರಾಫ್ಟ್ ರೀತಿಯಲ್ಲಿ ಈ ಕ್ರೆಡಿಟ್ ಕಾರ್ಡ್ಗೆ ನಿರ್ದಿಷ್ಟ ಕ್ರೆಡಿಟ್ ಲಿಮಿಟ್ ಕೊಡಲಾಗುತ್ತದೆ. ಈ ಮೊತ್ತವನ್ನು ಯಾವಾಗ ಬೇಕಾದರೂ ಬಳಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Mon, 7 August 23