ಹಣ ವಿತ್​ಡ್ರಾಗೆ ಮಾತ್ರವಲ್ಲ, ಡೆಬಿಟ್ ಕಾರ್ಡ್​ಗಳಿಂದ ಇನ್ನೂ ಹಲವು ಪ್ರಯೋಜನಗಳಿವೆ

|

Updated on: Aug 23, 2023 | 2:51 PM

Debit Card Benefits: ಬ್ಯಾಂಕ್​ನ ಡೆಬಿಟ್ ಕಾರ್ಡ್​ನಿಂದ ಹಣ ವಿತ್​ಡ್ರಾ ಮಾಡಲಷ್ಟೇ ಅಲ್ಲ ಹಲವು ರೀತಿಯ ಪ್ರಯೋಜನಗಳಿವೆ. ಡೆಬಿಟ್ ಕಾರ್ಡ್ ಬಳಕೆಯಿಂದ ಕ್ಯಾಷ್​​ಬ್ಯಾಕ್ ಸೇರಿದಂತೆ ವಿವಿಧ ರೀತಿಯ ರಿವಾರ್ಡ್​ಗಳು, ಇಎಂಐ ಸೌಲಭ್ಯ, ಇನ್ಷೂರೆನ್ಸ್ ಇತ್ಯಾದಿ ಸಿಗಬಹುದು.

ಹಣ ವಿತ್​ಡ್ರಾಗೆ ಮಾತ್ರವಲ್ಲ, ಡೆಬಿಟ್ ಕಾರ್ಡ್​ಗಳಿಂದ ಇನ್ನೂ ಹಲವು ಪ್ರಯೋಜನಗಳಿವೆ
ಡೆಬಿಟ್ ಕಾರ್ಡ್
Follow us on

ಡೆಬಿಟ್ ಕಾರ್ಡ್ ಎಂಬುದು ನಮ್ಮ ಖಾತೆಯಲ್ಲಿರುವ ಹಣವನ್ನು ಬಳಸಲು ಇರುವ ಸಾಧನ. ಎಟಿಎಂನಲ್ಲಿ ನಗದು ಹಣ ಹಿಪಡೆಯಲು, ಸ್ವೈಪ್ ಮಾಡಿ ಹಣ ಪಾವತಿಸಲು, ಯುಪಿಐ ಅಕೌಂಟ್​ಗೆ ಲಿಂಕ್ ಮಾಡಲು ಹೀಗೆ ನಾನಾ ಕಾರ್ಯಗಳಿಗೆ ಡೆಬಿಟ್ ಕಾರ್ಡ್ (Debit Card) ಬಳಕೆ ಆಗುತ್ತದೆ. ಕ್ರೆಡಿಟ್ ಕಾರ್ಡ್​ಗೆ ವ್ಯತಿರಿಕ್ತವಾಗಿ ಡೆಬಿಟ್ ಕಾರ್ಡ್ ಅನ್ನು ಬಳಸಿದಾಗ ಹಣ ನಿಮ್ಮ ಬ್ಯಾಂಕ್ ಖಾತೆಯಿಂದ ಮುರಿದುಕೊಳ್ಳುತ್ತದೆ. ಹಾಸಿಗೆ ಎಷ್ಟಿದೆಯೋ ಅಷ್ಟು ಮಾತ್ರ ಕಾಲು ಚಾಚಲು ಅವಕಾಶ ಇರುತ್ತದೆ. ಆದರೆ, ಡೆಬಿಟ್ ಕಾರ್ಡ್​ನಿಂದ ಹಣ ಪಡೆಯಲು ಮಾತ್ರವಲ್ಲ ಇನ್ನೂ ಹಲವು ಪ್ರಯೋಜನಗಳು ನಿಮಗೆ ಇರುತ್ತವೆ.

ರಿವಾರ್ಡ್​ಗಳು: ಬಹಳಷ್ಟು ಬ್ಯಾಂಕುಗಳು ತಮ್ಮ ಗ್ರಾಹಕರನ್ನು ಡೆಬಿಟ್ ಕಾರ್ಡ್ ಬಳಸುವಂತೆ ಉತ್ತೇಜಿಸುತ್ತವೆ. ಅದಕ್ಕಾಗಿ ಸಾಕಷ್ಟು ಪ್ರೋತ್ಸಾಹಕಗಳನ್ನು ನೀಡುತ್ತವೆ. ಉದಾಹರಣೆಗೆ, ಕೆಲ ನಿರ್ದಿಷ್ಟ ವಹಿವಾಟುಗಳಿಗೆ ಕ್ಯಾಷ್ ಬ್ಯಾಕ್, ಇತರ ರಿವಾರ್ಡ್​ಗಳನ್ನು ನೀಡಬಹುದು. ಇದೆಲ್ಲವೂ ಬ್ಯಾಂಕ್ ಹಾಗೂ ಅದರ ಡೆಬಿಟ್ ಕಾರ್ಡ್ ವಿಧದ ಮೇಲೆ ಅವಲಂಬಿತವಾಗಿರುತ್ತದೆ.

ವೆಚ್ಚದ ಮೇಲೆ ಅಂಕೆ: ನೀವು ಡೆಬಿಟ್ ಕಾರ್ಡ್ ಉಪಯೋಗಿಸಿ ವಹಿವಾಟು ನಡೆಸಿದರೆ ಅದು ಬ್ಯಾಂಕ್ ಸ್ಟೇಟ್ಮೆಂಟ್​ನಲ್ಲಿ ದಾಖಲಾಗುತ್ತದೆ. ನಿಮ್ಮ ಖರ್ಚುವೆಚ್ಚಗಳು ಎಲ್ಲೆಲ್ಲಿ ಎಷ್ಟೆಷ್ಟು ಆಗುತ್ತವೆ ಎಂಬುದನ್ನು ನೀವು ಟ್ರ್ಯಾಕ್ ಮಾಡಬಹುದು. ನೀವು ಕ್ಯಾಷ್ ವಿತ್​ಡ್ರಾ ಮಾಡಿ ಅದನ್ನು ಖರ್ಚಿಗೆ ಬಳಸಿದರೆ ಈ ರೀತಿ ಟ್ರ್ಯಾಕ್ ಮಾಡುವುದು ಕಷ್ಟಸಾಧ್ಯವಾಗುತ್ತದೆ.

ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೋಗಬೇಕೆಂದು ರೈಲು ಟಿಕೆಟ್ ಬುಕಿಂಗ್ ವೇಳೆ ಯಡವಟ್ಟು ಬೇಡ; ದಳ್ಳಾಳಿಗಳ ಬಗ್ಗೆ ಹುಷಾರ್

ಸುಲಭ ಬಳಕೆ: ಹೆಚ್ಚಿನ ಅಂಗಡಿಗಳಲ್ಲಿ ಡೆಬಿಟ್ ಕಾರ್ಡ್​ಗಳನ್ನು ಸ್ವೀಕರಿಸಲಾಗುತ್ತದೆ. ನಿಮ್ಮ ಯುಪಿಐ ಆ್ಯಪ್​ಗೂ ಡೆಬಿಟ್ ಕಾರ್ಡ್ ಅನ್ನು ಲಿಂಕ್ ಮಾಡಿ ಅದನ್ನು ಬಳಸಬಹುದು.

ಇಎಂಐ ಸಿಗುತ್ತೆ: ಕ್ರೆಡಿಟ್ ಕಾರ್ಡ್​ನಲ್ಲಿರುವಂತೆ ಕೆಲ ಬ್ಯಾಂಕುಗಳ ಡೆಬಿಟ್ ಕಾರ್ಡ್​ಗಳಲ್ಲಿ ಇಎಂಐ ಅವಕಾಶ ಇರುತ್ತದೆ. ದೊಡ್ಡ ಮಟ್ಟದ ವಹಿವಾಟು ನಡೆದಲ್ಲಿ 3ರಿಂದ 12 ತಿಂಗಳವರೆಗೆ ಸಮ ಕಂತುಗಳಲ್ಲಿ ಹಣ ಕಡಿತಗೊಳ್ಳುವ ಸೌಲಭ್ಯವನ್ನು ನೀಡಲಾಗುತ್ತದೆ. ಇದಕ್ಕೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ.

ಇನ್ಷೂರೆನ್ಸ್ ಲಾಭ: ಕೆಲ ಡೆಬಿಟ್ ಕಾರ್ಡ್​ಗಳಲ್ಲಿ ಇನ್ಷೂರೆನ್ಸ್ ಸೌಲಭ್ಯವೂ ಅಡಕವಾಗಿರುತ್ತದೆ. ನೀವು ಟಿಕೆಟ್ ಬುಕಿಂಗ್​ಗೆ ಡೆಬಿಟ್ ಕಾರ್ಡ್ ಬಳಸಿದರೆ ಟ್ರಾವಲ್ ಇನ್ಷೂರೆನ್ಸ್ ಸಿಗಬಹುದು.

ಇದನ್ನೂ ಓದಿ: eRupee App: ಒಂದೇ ಆ್ಯಪ್​ನಲ್ಲಿ ಇ-ರುಪೀ ಮತ್ತು ಯುಪಿಐ; ಕೆನರಾ ಬ್ಯಾಂಕ್​ನಿಂದ ಡಿಜಿಟಲ್ ರುಪೀ ಅಪ್ಲಿಕೇಶನ್

ವಿವಿಧ ಬ್ಯಾಂಕುಗಳು ಬೇರೆ ಬೇರೆ ರೀತಿಯ ಸೌಲಭ್ಯಗಳನ್ನು ಡೆಬಿಟ್ ಕಾರ್ಡ್​ಗಳಿಗೆ ನೀಡಬಹುದು. ನಿಮಗೆ ಡೆಬಿಟ್ ಕಾರ್ಡ್ ಡೆಲಿವರಿ ಬಂದಾಗ ಜೊತೆಯಲ್ಲಿ ಇದ್ದ ಬ್ರೋಚರ್ ಅನ್ನು ತೆರೆದು ನೋಡಿದರೆ ಯಾವ್ಯಾವ ಸೌಲಭ್ಯಗಳು ಸಿಗುತ್ತವೆ ಎಂಬುದನ್ನು ಗಮನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ