ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಇದ್ದಕ್ಕಿಂದ್ದಂತೆಯೆ ಕಡಿಮೆ ಮಾಡಲಾಗಿದೆಯಾ? ಇಲ್ಲಿದೆ ಕಾರಣಗಳು
Credit Card Limit: ಒಂದು ಕ್ರೆಡಿಟ್ ಕಾರ್ಡ್ಗೆ ಇಂತಿಷ್ಟು ಎಂದು ಸಾಲದ ಮಿತಿ ನಿಗದಿ ಮಾಡಲಾಗಿರುತ್ತದೆ. ಕೆಲವೊಮ್ಮೆ ಈ ಕ್ರೆಡಿಟ್ ಮಿತಿಯನ್ನು ಬ್ಯಾಂಕು ಕಡಿಮೆ ಮಾಡಬಹುದು. ಈ ಪರಿಸ್ಥಿತಿಗೆ ಏನು ಕಾರಣ ಎಂಬ ಒಂದು ಅವಲೋಕನ ಇಲ್ಲಿದೆ.
ಕ್ರೆಡಿಟ್ ಕಾರ್ಡ್ ಎಂಬುದು ಕಿರು ಅವಧಿಗೆ ಉಚಿತವಾಗಿ ಸಾಲ ಒದಗಿಸುವ ಒಂದು ಸಾಧನ. ನಮ್ಮ ಆದಾಯಕ್ಕೆ ಅನುಗುಣವಾಗಿ ಸಾಲದ ಸೌಲಭ್ಯ ಇರುತ್ತದೆ. ಅಂದರೆ ನಮ್ಮ ಹಣಕಾಸು ಸಾಮರ್ಥ್ಯದ ಪ್ರಕಾರ ಕ್ರೆಡಿಟ್ ಕಾರ್ಡ್ ಮಿತಿ (Credit Card Limit) ನಿಗದಿ ಮಾಡಲಾಗುತ್ತದೆ. ಕೆಲವೊಮ್ಮೆ ಬ್ಯಾಂಕುಗಳು ನಮ್ಮ ಆದಾಯ ಹೆಚ್ಚಳವಾಗಿದ್ದರೂ ದಿಢೀರನೇ ಕ್ರೆಡಿಟ್ ಕಾರ್ಡ್ನ ಮಿತಿಯನ್ನು ಕಡಿಮೆ ಮಾಡಬಹುದು. 75,000 ರೂ ಇದ್ದ ಕ್ರೆಡಿಟ್ ಮಿತಿ 50,000ಕ್ಕೆ ಇಳಿಸಬಹುದು. ಇದಕ್ಕೆಲ್ಲಾ ಹಲವು ಕಾರಣಗಳಿರುತ್ತದೆ. ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವುದರಿಂದ ಹಿಡಿದು ಅತಿಯಾಗಿ ಬಳಕೆ ಮಾಡದೇ ಇರುವವರೆಗೂ ಕೆಲ ಅಂಶಗಳು ನಮ್ಮ ಕ್ರೆಡಿಟ್ ರೇಟಿಂಗ್ ಮೇಲೆ ಪ್ರಭಾವಿಸುತ್ತವೆ. ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ಗೆ ಮಿತಿ ಕಡಿಮೆ ಮಾಡಲು ಪ್ರಮುಖ ಕಾರಣಗಳೇನು ಎಂಬ ವಿವರ ಈ ಕೆಳಕಂಡಂತಿದೆ.
ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದೇ ಇದ್ದಾಗ…
ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಗಡುವಿನೊಳಗೆ ಕಟ್ಟಿದರೆ ನಿಮ್ಮ ಕ್ರೆಡಿಟ್ ರೇಟಿಂಗ್ ಉತ್ತಮಗೊಳ್ಳುತ್ತದೆ. ಇಲ್ಲದಿದ್ದರೆ ನಿಮ್ಮನ್ನು ಅಪಾಯಕಾರಿ ಆಸ್ತಿಯ ವರ್ಗವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡಲಾಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದ ಮಂದಿಗೂ ಕೂಡ ಕ್ರೆಡಿಟ್ ಕಾರ್ಡ್ನಲ್ಲಿನ ಕ್ರೆಡಿಟ್ ಮಿತಿ ಕಡಿಮೆ ಮಾಡಲಾಗುತ್ತದೆ. ನೀವು ಕನಿಷ್ಠ ಬಿಲ್ ಮೊತ್ತ ಮಾತ್ರ ಪಾವತಿಸುತ್ತಾ, ಮೂಲ ಹಣವನ್ನು ಹಾಗೇ ಮುಂದುವರಿಸಿಕೊಂಡು ಹೋಗುತ್ತಿದ್ದರೂ ಕ್ರೆಡಿಟ್ ಸ್ಕೋರ್ ಕಡಿಮೆಗೊಳ್ಳಬಹುದು.
ಕ್ರೆಡಿಟ್ ಕಾರ್ಡ್ ಡೀಫಾಲ್ಟ್ ಪ್ರಮಾಣ ಹೆಚ್ಚಾದಾಗ…
ಭಾರತದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದೇ ಬಾಕಿ ಇರುವ ಒಟ್ಟು ಮೊತ್ತ 2.10 ಲಕ್ಷಕೋಟಿ ರೂ ಎಂದು ಆರ್ಬಿಐ ಇತ್ತೀಚೆಗೆ ದತ್ತಾಂಶ ಬಿಡುಗಡೆ ಮಾಡಿತ್ತು. ಡೀಫಾಲ್ಟ್ ಆಗಿರುವ ಪ್ರಮಾಣ, ಅಂದರೆ ಸಾಲ ವಸೂಲಾತಿ ಸಾಧ್ಯವಾಗದೇ ಇರುವಂಥದ್ದೇ 4,072 ಕೋಟಿ ರೂ ಎನ್ನಲಾಗಿದೆ. ಈ ರೀತಿಯಿಂದ ಬಾಧಿತವಾದ ಬ್ಯಾಂಕು ತನ್ನ ಸಾಲದ ಗುಣಮಟ್ಟ ಖಾತ್ರಿಪಡಿಸಿಕೊಳ್ಳಲು ಕ್ರೆಡಿಟ್ ಲಿಮಿಟ್ ಕಡಿಮೆ ಮಾಡಲು ಮುಂದಾಗುತ್ತದೆ. ಆಗ ಸಾಮಾನ್ಯವಾಗಿ ಕಡಿಮೆ ಆದಾಯದ ಗುಂಪಿನಲ್ಲಿರುವ ಅಥವಾ ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಮಂದಿಯ ಕ್ರೆಡಿಟ್ ಲಿಮಿಟ್ ಕಡಿಮೆಗೊಳ್ಳಬಹುದು.
ಇದನ್ನೂ ಓದಿ: Vijaypat Singhania: ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್ನ ಕರುಣಾಜನಕ ಕಥೆ
ಕ್ರೆಡಿಟ್ ಕಾರ್ಡ್ ಹೆಚ್ಚು ಬಳಸದಿರಿ
ಕ್ರೆಡಿಟ್ ಕಾರ್ಡ್ ಹೊಂದಿರುವ ಬಹಳ ಮಂದಿಯಲ್ಲಿ ಒಂದು ತಪ್ಪು ಕಲ್ಪನೆ ಇದೆ. ಕ್ರೆಡಿಟ್ ಕಾರ್ಡ್ನ ಮಿತಿಯನ್ನು ಪೂರ್ಣವಾಗಿ ಉಪಯೋಗಿಸಿದರೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತದೆ ಎಂಬುದು ಈ ತಪ್ಪು ಕಲ್ಪನೆ. ವಾಸ್ತವವಾಗಿ ಇದರಿಂದ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ನಿಮ್ಮ ಕ್ರೆಡಿಟ್ ಲಿಮಿಟ್ನಲ್ಲಿ ಶೇ. 30ಕ್ಕಿಂತಲೂ ಕಡಿಮೆ ಪ್ರಮಾಣವನ್ನು ಬಳಕೆ ಮಾಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಶೇ. 70ಕ್ಕಿಂತಲೂ ಹೆಚ್ಚು ಉಪಯೋಗ ಮಾಡುವುದು ರಿಸ್ಕಿ ಎಂದು ಪರಿಗಣಿಸಲಾಗುತ್ತದೆ.
ನೀವು ಕ್ರೆಡಿಟ್ ಕಾರ್ಡ್ ಮೂಲಕ ಹೆಚ್ಚು ವಹಿವಾಟು ನಡೆಸಬೇಕು ಎಂದಿದ್ದಲ್ಲಿ ಇನ್ನೊಂದು ಕ್ರೆಡಿಟ್ ಕಾರ್ಡ್ ಪಡೆದು ಉಪಯೋಗಿಸಿ. ಆ ಎಲ್ಲಾ ಕ್ರೆಡಿಟ್ ಕಾರ್ಡ್ಗಳಲ್ಲಿರುವ ಒಟ್ಟಾರೆ ಕ್ರೆಡಿಟ್ ಮಿತಿಯ ಶೇ. 30ಕ್ಕಿಂತಲೂ ಹೆಚ್ಚು ದಾಟದಂತೆ ನಿಮ್ಮ ವೆಚ್ಚವಿರಲಿ.
ಕ್ರೆಡಿಟ್ ಲಿಮಿಟ್ ದಿಢೀರ್ ಹೆಚ್ಚಾದರೆ
ನೀವು ಹಲವಾರು ಕ್ರೆಡಿಟ್ ಕಾರ್ಡ್ಗಳನ್ನು ಪಡೆದುಕೊಂಡರೆ ನಿಮ್ಮ ಒಟ್ಟಾರೆ ಕ್ರೆಡಿಟ್ ಲಿಮಿಟ್ ಗಣನೀಯವಾಗಿ ಹೆಚ್ಚಾಗುತ್ತದೆ. ಬ್ಯಾಂಕುಗಳು ಇಂಥ ಗ್ರಾಹಕರ ಬಗ್ಗೆ ನಿಗಾ ಇಡುತ್ತದೆ. ಅವರ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡಲು ಮುಂದಾಗಬಹುದು.
ಆರ್ಥಿಕ ದುಸ್ಥಿತಿ ಇರುವಾಗ…
ಆರ್ಥಿಕ ಹಿಂಜರಿತ ಇತ್ಯಾದಿ ಸಂಕಷ್ಟ ಪರಿಸ್ಥಿತಿ ಬಂದಾಗ ಹಾಗೂ ಹೆಚ್ಚಿನ ಜನರು ಹಣಕಾಸು ಕಷ್ಟಕ್ಕೆ ಸಿಲುಕಿದ್ದಾಗ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಬಹುತೇಕ ಎಲ್ಲಾ ಗ್ರಾಹಕರ ಕ್ರೆಡಿಟ್ ಲಿಮಿಟ್ ಅನ್ನು ಕಡಿಮೆಗೊಳಿಸಲು ಮುಂದಾಗಬಹುದು.
ಇದನ್ನೂ ಓದಿ: ಆರ್ಥಿಕ ಹಿಂಜರಿತವಾದರೆ ಷೇರುಮಾರುಕಟ್ಟೆಗೆ ಏನಾಗುತ್ತೆ? ಷೇರುಪೇಟೆ ಕುಸಿದರೂ ನಿಮ್ಮ ಹೂಡಿಕೆ ಹಣ ಭದ್ರವಾಗಿಸುವುದು ಹೇಗೆ?
ಕಾರ್ಡ್ ನಿಯಮಿತವಾಗಿ ಉಪಯೋಗಿಸದೇ ಇದ್ದಾಗ…
ಕಾರ್ಡ್ ಅನ್ನು ಅತಿಯಾಗಿ ಬಳಕೆ ಮಾಡಿದಾಗ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವಂತೆ, ಕಾರ್ಡ್ ಅನ್ನು ಕಡಿಮೆ ಬಳಸಿದರೂ ಸ್ಕೋರ್ ಕುಂದುತ್ತದೆ. ಇದೂ ಗಮನದಲ್ಲಿರಲಿ. ಕೈಯಲ್ಲಿ ಬೆರಳೆಣಿಕೆಯ ಕಾರ್ಡ್ಗಳನ್ನು ಇಟ್ಟುಕೊಂಡು ಇತಿಮಿತಿಯಲ್ಲಿ ನಿಯಮಿತವಾಗಿ ಆ ಕಾರ್ಡ್ಗಳನ್ನು ಉಪಯೋಗಿಸುವುದು ಸೂಕ್ತ.
ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆ ಮಾಡಿದಾಗ ನೀವೇನು ಮಾಡಬಹುದು?
ಒಂದು ವೇಳೆ ಯಾವುದಾರೂ ಕಾರಣಕ್ಕೆ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಕಡಿಮೆಗೊಳಿಸಲಾಗಿದ್ದರೆ ನೀವು ಬ್ಯಾಂಕಿಗೆ ಹೋಗಿ ವಿಚಾರಿಸಬಹುದು. ಸೂಕ್ತ ಸಮಜಾಯಿಷಿ ಕೊಟ್ಟು, ಕ್ರೆಡಿಟ್ ಮಿತಿ ಹೆಚ್ಚಿಸುವಂತೆ ಬ್ಯಾಂಕಿಗೆ ನೀವು ಮನವಿ ಮಾಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ