ಆನ್ಲೈನ್ ಲೋನ್ ಆ್ಯಪ್ಗಳ ಬಗ್ಗೆ ನೀವು ಕೇಳಿರಬಹುದು. ಸಾಲ ಕೊಟ್ಟು ಜನರನ್ನು ಸುಲಿಗೆ ಮಾಡುವ ಮಹಾ ಜಾಲ (loan scams) ಅದು. ಸಾಲ ಕೊಡುವ ಮುನ್ನ ಸಂಸ್ಥೆ ಹೇಳುವುದು ಒಂದು, ಬಳಿಕ ಅದರ ವರ್ತನೆ, ಭಾಷೆಯೇ ಇನ್ನೊಂದು. ಸಾಲ ಪಡೆದವರನ್ನು ಬ್ಲ್ಯಾಕ್ಮೇಲ್ ಮಾಡಿ ಅವರನ್ನು ಹೈರಾಣವಾಗಿ ಮಾಡಿಬಿಡುತ್ತಾರೆ. ಇಂಥ ನತದೃಷ್ಟರಲ್ಲಿ ಪಲ್ಲವಿ (ಹೆಸರು ಬದಲಿಸಲಾಗಿದೆ) ಒಬ್ಬರು. ಫಿನ್ಟೆಕ್ ಕಂಪನಿಯೊಂದರಿಂದ 50,000 ರೂ ಸಾಲ ಪಡೆದಿದ್ದ ಇವರು ಬಡ್ಡಿ ಸೇರಿ 75 ಸಾವಿರ ರೂ ಪಾವತಿಸಿದ್ದಾರೆ. ಆದರೆ, ಸಾಲ ಇನ್ನೂ ಬಾಕಿ ಇದೆ ಎಂದು ದುಂಬಾಲು ಬಿದ್ದ ಕಂಪನಿ ಕಡೆಯಿಂದ ಇವರಿಗೆ ಬೆದರಿಕೆ ಕಾಲ್ಗಳು ಬರುತ್ತಲೇ ಇವೆ. ಈಕೆಯ ಫೋನ್ನಲ್ಲಿರುವ ಫೋಟೋವನ್ನು ಮಾರ್ಫ್ ಮಾಡಿ, ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಸಲಾಗುತ್ತಿದೆ. ಫೋನ್ ಕರೆ ಮಾಡಿದವನ ವಿರುದ್ಧ ಕಂಪನಿಯ ಮೇಲಿನ ಅಧಿಕಾರಿಗಳಿಗೆ ದೂರು ಕೊಡಲು ಪಲ್ಲವಿ ನಿಶ್ಚಯಿಸುತ್ತಾರೆ. ಆ್ಯಪ್ನಲ್ಲಿ ಕೊಡಲಾಗಿದ್ದ ವಿಳಾಸವನ್ನು ಹುಡುಕಿ ಹೋದರೆ ಅಂಥದ್ದು ಇಲ್ಲ ಎಂಬುದು ಗೊತ್ತಾಗುತ್ತದೆ. ಸಾಲ ಕೊಟ್ಟ ಕಂಪನಿಯ ಗುರುತೇ ಎಲ್ಲಿಯೂ ಮೂಡಿಲ್ಲ. ಪಲ್ಲವಿ ಫೈಟ್ ಮಾಡಬೇಕೆಂದು ನಿರ್ಧರಿಸಿದರೂ ಅವರದ್ದು ಗಾಳಿಗೆ ಗುದ್ದಾಡುವಂತೆಯೇ ಆಗುತ್ತದೆ.
ಇದು ಪಲ್ಲವಿಯೊಬ್ಬರ ಕಥೆಯಲ್ಲ, ಇಂಥ ಸಾವಿರಾರು ಮಂದಿ ಜನರು ನಕಲಿ ಹಣಕಾಸು ಸಂಸ್ಥೆಗಳ ಜಾಲಕ್ಕೆ ಸಿಲುಕಿ ವಿಲವಿಲ ಒದ್ದಾಡಿರುವುದುಂಟು. ಸಾಲ ನೀಡೋ ಇಂಥ ಬಹಳಷ್ಟು ಆಪ್ಗಳಿಗೆ ಅಡ್ರೆಸ್ ಇರಲ್ಲ ಹಾಗೂ ಮುಖಾನೂ ಇರಲ್ಲ. ಇಂಥ ಕಂಪನಿಗಳು ಜನರಿಗೆ ಮೋಸ ಮಾಡಲೆಂದೇ ಹುಟ್ಕೊಂಡಿರತ್ವೆ. ಜನರನ್ನು ಮೋಸಗೊಳಿಸಲು ಏನ್ ಬೇಕಾದ್ರೂ ಮಾಡಕ್ಕೆ ರೆಡಿ ಇರತ್ವೆ.
ಕೋವಿಡ್ ಟೈಮ್ನಲ್ಲಿ ಬಹಳಷ್ಟು ಜನ ತಮ್ಮ ಕೆಲಸಗಳನ್ನು ಕಳ್ಕೊಂಡ್ರು. ಬಹಳಷ್ಟು ಜನರ ಸಂಬಳಗಳಲ್ಲಿ ಕಡಿತ ಆಗೋಯ್ತು. ಕೋವಿಡ್ ನಂತರ, ಜನರ ತುರ್ತು ಹಣದ ಅವಶ್ಯಕತೆಗಳ ಪ್ರಮಾಣವೂ ಹೆಚ್ಚಾಯ್ತು. ಇದೇ ಕಾರಣದಿಂದ ಸಾಲ ನೀಡುವ ಡಿಜಿಟಲ್ ಆಪ್ಗಳ ವ್ಯವಹಾರಗಳೂ ಹೆಚ್ಚಾದವು. ಆರ್ಬಿಐ ಪ್ರಕಾರ, ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದ ಆನ್ಲೈನ್ ಸಾಲ ಪಡೆಯುವವರ ಸಂಖ್ಯೆ ಕೇವಲ ಮೂರೇ ವರ್ಷಗಳಲ್ಲಿ 12 ಪಟ್ಟು ಹೆಚ್ಚಾಗಿತ್ತು. ವರ್ಷ 2017ರಲ್ಲಿ ಡಿಜಿಟಲ್ ಸಾಲಗಳ ಮೊತ್ತ 11,671 ಕೋಟಿ ರೂಪಾಯಿಗಳಷ್ಟು ಮಾತ್ರ ಇತ್ತು. ಆದರೆ, 2018ರಲ್ಲಿ, ಇದು 29,888 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು. 2019ರಲ್ಲಿ, ಇದು ಇನ್ನೂ ಅಗಾಧವಾಗಿ ಬೆಳೆದು 72,663 ಕೋಟಿ ರೂಪಾಯಿಗಳಾಯಿತು. ಇದು 2020ರಲ್ಲಿ 1.42 ಲಕ್ಷ ಕೋಟಿ ರೂಪಾಯಿಗಳ ಮಟ್ಟವನ್ನೂ ಮುಟ್ಟಿಬಿಟ್ಟಿತು.
ಇದನ್ನೂ ಓದಿ: ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಭಯವಾ? ನಿಮಗಾಗಿ ಇಗೋ ಇದೆ ಈಕ್ವಿಟ್ ಸೇವಿಂಗ್ಸ್ ಫಂಡ್
ವರ್ಷ 2022ರ ಜನವರಿಯಿಂದ ಫೆಬ್ರವರಿಯಲ್ಲಿ, ಆರ್ಬಿಐ ಒಂದು ಅಧ್ಯಯನ ನಡೆಸಿತು. ಇದರಲ್ಲಿ, ಸುಮಾರು 1,100 ಸಾಲ ನೀಡಿಕೆಯ ಆಪ್ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವು ಕಾನೂನುಬಾಹಿರ ಎನ್ನುವುದು ಸ್ವತ: ಆರ್ಬಿಐನ ಗಮನಕ್ಕೇ ಬಂತು. ಈಗ, ಕ್ರಮಬದ್ಧವಾಗಿರುವ ಸಾಲನೀಡಿಕೆಯ ಆಪ್ಗಳ ಒಂದು ಪಟ್ಟಿಯನ್ನು ತಯಾರಿಸಲು ಆರ್ಬಿಐ ಯೋಜಿಸುತ್ತಿದೆ. ಗೂಗಲ್ ಕಂಪನಿಯು 2022ರ ಜನವರಿಯಿಂದ ಜೂನ್ವರೆಗೆ ಇಂತಹ ಸುಮಾರು 2200 ನಕಲಿ ಆಪ್ಗಳನ್ನು ತನ್ನ ಪ್ಲೇಸ್ಟೋರ್ನಿಂದ ನಿಷೇಧ ಮಾಡಿದೆ. ಎಲ್ಲಾ ಸಾಲ ನೀಡಿಕೆಯ ಆಪ್ಗಳು ಯಾವ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಂಬಂಧ ಹೊಂದಿವೆ ಎಂಬುದನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು ಎಂದೂ ಸಹ ಗೂಗಲ್ ಆದೇಶಿಸಿದೆ. ಹೀಗೆ ಮಾಡದಿದ್ದಲ್ಲಿ, ಗೂಗಲ್ ಅಂತಹ ಆಪ್ಗಳನ್ನು ಬ್ಯಾನ್ ಮಾಡಲಿದೆ.
ಆಗಸ್ಟ್ 2022ರಲ್ಲಿ, ಸಾಲನೀಡಿಕೆಯ ಡಿಜಿಟಲ್ ಆಪ್ಗಳ ನಿಯಂತ್ರಣಕ್ಕಾಗಿ ಆರ್ಬಿಐ ಕೆಲ ನಿಯಮಗಳನ್ನು ಪ್ರಕಟಿಸಿದೆ. ಗ್ರಾಹಕರು ಈ ವಿಷಯದಲ್ಲಿ ಬಹಳ ಎಚ್ಚರದಿಂದಿರಬೇಕು. ಇಂತಹ ವಂಚಕ ಆಪ್ಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು 5 ಸುಲಭ ಮಾರ್ಗಗಳು ಇಲ್ಲಿವೆ.
1) ಅಧಿಕೃತ ಹಣಕಾಸು ಸಂಸ್ಥೆ ಎಂದು ಖಚಿತಪಡಿಸಿಕೊಳ್ಳಿ: ಸಾಲ ನೀಡುವ ಕಂಪನಿ ಅಧಿಕೃತವಾದದ್ದೇ ಎಂದು ತಿಳಿದುಕೊಳ್ಳಿ. ಆರ್ಬಿಐನಲ್ಲಿ ನೋಂದಾಯಿಸಲಾದ ಆಪ್ಗಳಿಂದಲೇ ಸಾಲ ತೊಗೊಳ್ಳಿ. ಇಂತಹ ಆಪ್ಗಳು ಆರ್ಬಿಐನಲ್ಲಿ ನೋಂದಾಯಿಸಲ್ಪಟ್ಟ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರಲೇಬೇಕು. ಆರ್ಬಿಐನ ವೆಬ್ಸೈಟ್ನಲ್ಲಿ ನೋಂದಾಯಿಸಲ್ಪಟ್ಟ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪಟ್ಟಿ ಸಿಗುತ್ತದೆ. ಒಂದು ವೇಳೆ, ಸಾಲ ನೀಡುವ ಆಪ್ ನೋಂದಾಯಿಸಲ್ಪಟ್ಟಿದ್ದರೆ, ಅದರ ಹೆಸರು ಆಧಿಕೃತ ವೆಬ್ಸೈಟ್ನಲ್ಲಿ ಅಥವಾ ಮೊಬೈಲ್ ಆಪ್ನಲ್ಲಿ ಇರುತ್ತದೆ. ಹಾಗೂ ಅದು ಯಾವ ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗೆ ಸಂಬಂಧಿಸಿದೆ ಎಂಬ ಮಾಹಿತಿಯೂ ಇರುತ್ತದೆ.
ಇದನ್ನೂ ಓದಿ: ಕ್ಯಾಷ್ಬ್ಯಾಕ್ ಬಗ್ಗೆ ಹುಷಾರ್; ದುರಾಸೆಗೆ ಬಿದ್ದು ಮೋಸ ಹೋಗದಿರಿ; ಏನಿದೆ ಕ್ಯಾಷ್ಬ್ಯಾಕ್ ಮರ್ಮ?
2) ಸಾಲಕ್ಕೆ ಒಪ್ಪಂದ: ಸಾಲದ ಅಗ್ರಿಮೆಂಟ್ ಇಲ್ಲದೆ ಸಾಲ ತೊಗೋಬೇಡಿ. ಸಾಲದ ಅಗ್ರಿಮೆಂಟ್ ಇಲ್ಲದೆಯೇ ಸಾಲ ನೀಡುತ್ತಾರೆಂದರೆ, ಯಾವ ದರದಲ್ಲಿ ಬಡ್ಡಿ ಹಾಕ್ತಾರೆ, ಮರುಪಾವತಿ ನಿಧಾನವಾದರೆ ಎಷ್ಟು ದಂಡ ಹಾಕ್ತಾರೆ, ಹಾಗೂ ಕಟ್ಟಬೇಕಾಗಿರೋ ಸಾಲದ ಬಾಕಿ ಎಷ್ಟು ಎನ್ನುವುದಕ್ಕೆ ಯಾವುದೇ ಲಿಖಿತ ಆಧಾರ ಇರಲ್ಲ.
3) ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ವಿವರ ಕೇಳಿದರೆ ಹುಷಾರ್: ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಹಾಗೂ ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಅದರ ಎಕ್ಸ್ಪೈರಿ ದಿನಾಂಕಗಳಂತಹ ಮಾಹಿತಿಗಳನ್ನು ಕೇಳುವ ಕಂಪನಿಗಳು ಸಾಮಾನ್ಯವಾಗಿ ನಕಲಿ ಕಂಪನಿಗಳಾಗಿರುತ್ವೆ.
4) ಆ್ಯಪ್ ಇನ್ಸ್ಟಾಲ್ ಮಾಡುವಾಗ ಪರ್ಮಿಷನ್: ನಿಮ್ಮಿಂದ ಬಹಳಷ್ಟು ಅನುಮತಿಗಳನ್ನು ಕೇಳುವ ಮೊಬೈಲ್ ಆಪ್ಗಳ ಬಗ್ಗೆ ಎಚ್ಚರದಿಂದಿರಿ. ಸಾಲ ನೀಡುವ ಕಂಪನಿಗೆ ನಿಮ್ಮ ಫೋನ್ನ ಫೋಟೋ ಗ್ಯಾಲರಿ ಹಾಗೂ ಆಡಿಯೋ ಮತ್ತು ವಿಡಿಯೋ ರಿಕಾರ್ಡಿಂಗ್ಗಳ ಅವಶ್ಯಕತೆ ಏನಿದೆ ಎಂಬುದನ್ನು ನೀವೇ ಯೋಚಿಸಿ.
5) ಕಂಪನಿಯ ವಿವರ ಖಚಿತಪಡಿಸಿಕೊಳ್ಳಿ: ನೀವು ಯಾವಾಗಲೇ ಆದರೂ ಆನ್ಲೈನ್ ಆಪ್ ಒಂದರಿಂದ ಸಾಲ ತೊಗೊಂಡ್ರೆ, ಆ ಕಂಪನಿಯ ಸಂಪೂರ್ಣ ಮಾಹಿತಿಯನ್ನು ನಿಮ್ಮ ಬಳಿ ಇಟ್ಕೊಳ್ಳಿ. ಅದರ ಆಫೀಸ್ ಎಲ್ಲಿದೆ, ಕಂಪನಿ ಎಷ್ಟು ಹಳೆಯದು, ಹಾಗೂ ಕಂಪನಿಯನ್ನು ನಡೆಸುತ್ತಿರೋರು ಯಾರು ಎಂಬ ಮಾಹಿತಿಗಳು ನಿಮ್ಮ ಬಳಿ ಇರಲೇಬೇಕು. ಈ ಮಾಹಿತಿಗಳು ಬಹಳ ಸಾಧಾರಣ ಎನಿಸಿದರೂ ಬಹಳ ಮುಖ್ಯವಾದ ಮಾಹಿತಿಗಳು. ನೀವು ಸಾಲ ಪಡೆದ ಕಂಪನಿಯ ಆಫೀಸ್ ಎಲ್ಲಿದೆ ಎಂದು ತಿಳಿಯುವುದು ನಿಮಗೆ ಸಾಧ್ಯವಾಗದಿದ್ದರೆ ಅದು ಎಂತಹ ಅಪಾಯಕಾರಿ ಕಂಪನಿ ಇರಬಹುದೆಂಬುದನ್ನು ನೀವೇ ಯೋಚಿಸಿ.
(ಕೃಪೆ: ಮನಿ9)
ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ