ಬೆಂಗಳೂರು, ಆಗಸ್ಟ್ 23: ಇಸ್ರೋ ನಿರ್ಮಿಸಿ ಕಳುಹಿಸಿದ ಚಂದ್ರಯಾನ-3 (Chandrayaan) ನೌಕೆ ಚಂದ್ರನ ದಕ್ಷಿಣ ಧ್ರುವದ ನೆಲದ ಮೇಲೆ ಯಶಸ್ವಿಯಾಗಿ ಇಳಿದಿದೆ. ಭಾರತದಿಂದ ಅನ್ಯಗ್ರಹದ ಮೇಲೆ ನೌಕೆ ಇಳಿಸಲಾಗಿದ್ದು ಇದೇ ಮೊದಲು. ಚಂದ್ರನ ದಕ್ಷಿಣ ಧ್ರುವದಲ್ಲಿ (Lunar South Pole) ನೌಕೆ ಇಳಿಸಿದ ಮೊದಲ ದೇಶ ಭಾರತ. ಬಹಳ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ಸುದೀರ್ಘ 41 ದಿನಗಳ ಕಾಲ ಆಗಸದಲ್ಲಿ ಪ್ರಯಾಣಿಸಿ ಚಂದ್ರನನ್ನು ಸ್ಪರ್ಧಿಸಿದೆ ಭಾರತದ ನೌಕೆ. ಈ ಮಹತ್ವದ ಸಾಧನೆಗೆ ಇಸ್ರೋ ಜೊತೆ ಹಲವು ಸಂಸ್ಥೆಗಳ ಸಹಕಾರ ಮತ್ತು ಕೊಡುಗೆ ಇದೆ. ಅದರಲ್ಲೂ ದಕ್ಷಿಣ ಭಾರತದ ಕೆಲ ಸಂಸ್ಥೆಗಳು ಚಂದ್ರಯಾನ ಯೋಜನೆಗೆ ಮಹತ್ವದ ಕೊಡುಗೆ ನೀಡಿವೆ.
1940ರಲ್ಲಿ ಶುರುವಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (ಎಚ್ಎಎಲ್) ಸಂಸ್ಥೆ ಚಂದ್ರಯಾನ-3 ಯೋಜನೆಯಲ್ಲಿ ಮಹತ್ವದ ಪಾತ್ರ ಹೊಂದಿದೆ. ಯುದ್ಧವಿಮಾನಗಳನ್ನು ತಯಾರಿಸುವಲ್ಲಿ ಕೌಶಲ್ಯ ಹೊಂದಿರುವ ಎಚ್ಎಎಲ್ ಸಂಸ್ಥೆ ಚಂದ್ರಯಾನ ನೌಕೆಯನ್ನು ಹೊತ್ತುಹೋದ ಪಿಎಸ್ಎಲ್ವಿ ರಾಕೆಟ್ ನಿರ್ಮಾಣದ ಪಾತ್ರ ಹೊಂದಿದೆ. ಎಂಜಿನಿಯರಿಂಗ್ ಸಂಸ್ಥೆ ಎಲ್ ಅಂಡ್ ಟಿ ಜೊತೆ ಸೇರಿ ಎಚ್ಎಎಲ್ ಸಂಸ್ಥೆ ಪಿಎಸ್ಎಲ್ವಿ ರಾಕೆಟ್ಗಳನ್ನು ತಯಾರಿಸುತ್ತದೆ.
ಇದನ್ನೂ ಓದಿ: ಭಾರತದ ಚಂದ್ರಯಾನ ಯೋಜನೆ ಬಗ್ಗೆ ವಿಶ್ವಶ್ರೀಮಂತ ಇಲಾನ್ ಮಸ್ಕ್ ಪ್ರತಿಕ್ರಿಯೆ ವಿಶೇಷವಾದುದು
ಬೆಂಗಳೂರಿನ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಚಂದ್ರಯಾನ-3 ಯೋಜನೆಗೆ 300ಕ್ಕೂ ಹೆಚ್ಚು ಪ್ರಮುಖ ಬಿಡಿಭಾಗಗಳನ್ನು ಸರಬರಾಜು ಮಾಡಿದೆ. 1994ರಲ್ಲಿ ಸ್ಥಾಪನೆಯಾದ ಸೆಂಟಮ್ ಎಲೆಕ್ಟ್ರಾನಿಕ್ಸ್ ಮೈಕ್ರೋ ಎಲೆಕ್ಟ್ರಾನಿಕ್ಸ್ ಮತ್ತು ಸಬ್ಸಿಸ್ಟಂನಗಳ ಡಿಸೈನ್ ಮತ್ತು ತಯಾರಿಕಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದೆ.
ಮಿಧಾನಿ (Midhani) ಎಂದೇ ಪರಿಚಿತವಾಗಿರುವ ಹೈದರಾಬಾದ್ನ ಮಿಶ್ರಾ ಧಾತು ನಿಗಮ್ ಲಿ ಸಂಸ್ಥೆ ಚಂದ್ರಯಾನದ ಲ್ಯಾಂಡರ್ ಮತ್ತು ರೋವರ್ ತಯಾರಿಕೆಗೆ ಟೈಟೇನಿಯಮ್ ಅಲಾಯ್ಗಳನ್ನು ಪೂರೈಸಿದೆ. ಚಂದ್ರಯಾನದ ವೇಳೆ ಎದುರಾಗುವ ಹವಾಮಾನ ವೈಪರೀತ್ಯಗಳನ್ನು ತಾಳಿಕೊಳ್ಳಲು ಈ ಟೈಟೇನಿಯಮ್ ಲೋಹಗಳು ಬಹಳ ಮುಖ್ಯ.
ಹೈದರಾಬಾದ್ನ ಎಂಟಿಎಆರ್ ಟೆಕ್ನಾಲಜೀಸ್ ಸಂಸ್ಥೆ ಪ್ರಿಸಿಶನ್ ಎಂಜಿನಿಯರಿಂಗ್ನಲ್ಲಿ ನಿಷ್ಣಾತಿ ಹೊಂದಿದೆ. ಚಂದ್ರಯಾನ ಯೋಜನೆಗೆ ಬೇಕಾದ ಕೆಲ ಪ್ರಮುಖ ಭಾಗಗಳನ್ನು ಎಂಟಿಎಆರ್ ತಯಾರಿಸಿ ಕೊಟ್ಟಿದೆ.
ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಹಲವು ಕಂಪನಿಗಳು ಇಸ್ರೋದ ಚಂದ್ರಯಾನಕ್ಕೆ ಕೊಡುಗೆ ನೀಡಿವೆ. ಇದರೊಂದಿಗೆ ಭಾರತದಲ್ಲಿ ಆರೋಗ್ಯಯುತವಾದ ಬಾಹ್ಯಾಕಾಶ ಯೋಜನೆಗಳ ಪರಿಸರ ನಿರ್ಮಾಣವಾದಂತಾಗಿದೆ. ಈಗಾಗಲೇ ಬಹಳಷ್ಟು ಖಾಸಗಿ ಕಂಪನಿಗಳು ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ