ನವದೆಹಲಿ, ಆಗಸ್ಟ್ 24: ಈರುಳ್ಳಿ ಸೇರಿದಂತೆ ಭಾರತ ಕೆಲ ಆಹಾರವಸ್ತುಗಳ ರಫ್ತನ್ನು (Food Items Exports) ನಿರ್ಬಂಧಿಸಿದೆ. ಇದೇ ವೇಳೆ ಸಕ್ಕರೆಯ ರಫ್ತನ್ನೂ ನಿಷೇಧಿಸುವ ಸಾಧ್ಯತೆ ಇದೆ. ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಶುರುವಾಗುವ ಮುಂದಿನ ಋತುವಿನಲ್ಲಿ ಸಕ್ಕರೆ ರಫ್ತಿಗೆ ಭಾರತ ನಿಷೇಧ ಹೇರುವ ಸಾಧ್ಯತೆ ಇದೆ. ಮಳೆ ಅಭಾವದಿಂದ ಕಬ್ಬಿನ ಬೆಳೆಯ ಇಳುವರಿ (Sugarcane Yield) ಕಡಿಮೆ ಆಗಿರುವುದರಿಂದ ಮುಂಬರುವ ದಿನಗಳಲ್ಲಿ ಸಕ್ಕರೆ ಅಭಾವ ಕಾಡಬಹುದು. ಈ ಕಾರಣಕ್ಕೆ ರಫ್ತನ್ನು ನಿಷೇಧಿಸಲು ಸರ್ಕಾರ ಆಲೋಚಿಸುತ್ತಿದೆ ಎಂದು ಮೂರು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಈ ವರದಿ ಹೇಳಿದೆ. ಇದು ನಿಜವಾದಲ್ಲಿ ಕಳೆದ ಏಳು ವರ್ಷದಲ್ಲಿ ಇದೇ ಮೊದಲ ಬಾರಿಗೆ ಸಕ್ಕರೆ ರಫ್ತು ನಿಷೇಧವಾದಂತಾಗುತ್ತದೆ. 2016ರಲ್ಲಿ ಸರ್ಕಾರ ಸಕ್ಕರೆ ರಫ್ತಿನ ಮೇಲೆ ಶೇ. 20ರಷ್ಟು ಸುಂಕ ವಿಧಿಸಿತ್ತು.
ಜಾಗತಿಕವಾಗಿ ಅತಿಹೆಚ್ಚು ಸಕ್ಕರೆ ರಫ್ತು ಮಾಡುವ ದೇಶಗಳಲ್ಲಿ ಭಾರತದ್ದು ಮೂರನೇ ಸ್ಥಾನ. ಬ್ರೆಜಿಲ್ ಅತಿಹೆಚ್ಚು ಸಕ್ಕರೆ ರಫ್ತು ಮಾಡುತ್ತದೆ. 2022-23ರ ಹಣಕಾಸು ವರ್ಷದಲ್ಲಿ ಅದು 2.82 ಕೋಟಿ ಮೆಟ್ರಿಕ್ ಟನ್ನಷ್ಟು ಸಕ್ಕರೆಯನ್ನು ಹೊರದೇಶಗಳಿಗೆ ರಫ್ತು ಮಾಡುತ್ತದೆ. ಥಾಯ್ಲೆಂಡ್ ಮತ್ತು ಭಾರತ ಕ್ರಮವಾಗಿ 1.1 ಕೋಟಿ ಮೆಟ್ರಿಕ್ ಟನ್ ಹಾಗೂ 65 ಲಕ್ಷ ಮೆಟ್ರಿಕ್ ಟನ್ಗಳಷ್ಟು ಸಕ್ಕರೆ ರಫ್ತು ಮಾಡುತ್ತವೆ.
ಇದನ್ನೂ ಓದಿ: ಚಂದ್ರಯಾನ ಯೋಜನೆಗೆ ಕೈಜೋಡಿಸಿದ ದಕ್ಷಿಣ ಭಾರತೀಯ ಸಂಸ್ಥೆಗಳು; ಇವುಗಳ ಕೊಡುಗೆ ಏನು, ಇಲ್ಲಿದೆ ವಿವರ
ಭಾರತವೇನಾದರೂ ಸಕ್ಕರೆ ರಫ್ತು ನಿಲ್ಲಿಸಿದರೆ ಜಾಗತಿಕವಾಗಿ ಸಕ್ಕರೆ ಕೊರತೆ ಕಾಡಬಹುದು. ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ವಿವಿಧ ದೇಶಗಳಲ್ಲಿ ಸಕ್ಕರೆ ಬೆಲೆ ಹೆಚ್ಚಳವಾಗಬಹುದು. ಇದರಿಂದ ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಹಣದುಬ್ಬರ ಹೆಚ್ಚಾಗುವ ಭೀತಿ ಇದೆ.
ಭಾರತ ಸಕ್ಕರೆ ರಫ್ತನ್ನು ನಿಷೇಧಿಸುವುದರ ಹಿಂದೆ ಎಥನಾಲ್ ತಯಾರಿಕೆಯ ಸಂಗತಿಯೂ ಇದೆ ಎನ್ನಲಾಗಿದೆ. ಕಬ್ಬಿನ ಇಳುವರಿ ಕಡಿಮೆ ಆಗಿ ಈ ಬಾರಿ ಸಕ್ಕರೆಯ ಕೊರತೆ ಕಾಡುವ ಸಾಧ್ಯತೆ ಇರುವುದು ಸಕ್ಕರೆ ರಫ್ತಿಗೆ ಪ್ರಮುಖ ಕಾರಣವಾಗಿದೆ. ಅದೇ ರೀತಿ ಹೆಚ್ಚುವರಿ ಕಬ್ಬು ಬೆಳೆಯಿಂದ ಎಥನಾಲ್ ಅನ್ನು ತಯಾರಿಸುವ ಇಂಗಿತವೂ ಸರ್ಕಾರಕ್ಕಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ತನ್ನ ಮೂಲವೊಂದನ್ನು ಉಲ್ಲೇಖಿಸಿ ತಿಳಿಸಿದೆ.
ಟೊಮೆಟೋ, ಈರುಳ್ಳಿಯಂತೆ ಕಬ್ಬಿನ ಬೆಳೆಯಲ್ಲೂ ಮಹಾರಾಷ್ಟ್ರ ಮತ್ತು ರಾಜ್ಯಗಳು ಕರ್ನಾಟಕ ಮುಂಚೂಣಿಯಲ್ಲಿವೆ. ಭಾರತದಾದ್ಯಂತ ಒಟ್ಟಾರೆ ಉತ್ಪಾದನೆಯಾಗುವ ಕಬ್ಬಿನಲ್ಲಿ ಈ ಎರಡು ರಾಜ್ಯಗಳ ಪಾಲು ಅರ್ಧದಷ್ಟಿದೆ. ಕರ್ನಾಟಕದಲ್ಲಿ ಈ ಬಾರಿ ನಿರೀಕ್ಷಿತ ರೀತಿಯಲ್ಲಿ ಮುಂಗಾರು ಬಂದಿಲ್ಲದಿರುವುದು ಕಬ್ಬಿನ ಬೆಳೆ ಇಳುವರಿ ಕಡಿಮೆ ಆಗುವ ಆತಂಕ ಇದೆ.
ಒಂದು ವೇಳೆ ಸರ್ಕಾರ ಸಕ್ಕರೆ ರಫ್ತನ್ನು ನಿಷೇಧಿಸದೇ ಇದ್ದರೆ, ಭಾರತದಲ್ಲಿ ಸಕ್ಕರೆ ಕೊರತೆ ಎದುರಾಗಿ ಬೆಲೆ ಹೆಚ್ಚಳವಾಗಬಹುದು. ಈಗಾಗಲೇ ಹಣದುಬ್ಬರ ಏರಿಕೆಯಿಂದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿರುವಾಗ ಸಕ್ಕರೆ ಬೆಲೆ ಏರಿಕೆಯಿಂದ ಹಣದುಬ್ಬರ ಇನ್ನಷ್ಟು ಹೆಚ್ಚಾಗುವ ಅಪಾಯ ಇದೆ. ಹೀಗಾಗಿ, ಭಾರತ ಸಕ್ಕರೆ ರಫ್ತನ್ನು ನಿಷೇಧಿಸಲು ಆಲೋಚಿಸುತ್ತಿರುವುದು ತಿಳಿದುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ