Economic Crisis: ಫೋರೆಕ್ಸ್ ರಿಸರ್ವ್ ಮತ್ತೆ ಕುಸಿತ; ವಿನಾಶದತ್ತ ಆರ್ಥಿಕತೆ- ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ
Subramanian Swamy Warning: ಪ್ರಧಾನಿ ಮೋದಿ ಅವರಿಗೆ ಎದುರಾಗುತ್ತಿರುವ ಆರ್ಥಿಕ ಬಿಕ್ಕಟ್ಟು ಎದುರಾಗುತ್ತಿರುವ ಸಂಗತಿಯ ಅರಿವಿಲ್ಲ. ಈ ಬಗ್ಗೆ ಅವರಿಗೆ ತಿಳಿಸಲು ಸಹವರ್ತಿಗಳು ಹೆದರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
- ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಮಾರ್ಚ್ 4ರಿಂದ 10ವರೆಗಿನ ಅವಧಿಯಲ್ಲಿ 2.30 ಬಿಲಿಯನ್ ಡಾಲರ್ನಷ್ಟು ಕುಸಿತ ಕಂಡಿದೆ.
- ಫಾರೆಕ್ಸ್ ರಿಸರ್ವ್ ಕುಸಿದಿರುವುದರಿಂದ ಆರ್ಥಿಕ ಬಿಕ್ಕಟು ಅನಿವಾರ್ಯ. ಈ ಸಂಗತಿಯನ್ನು ಪ್ರಧಾನಿ ಮೋದಿಗೆ ತಿಳಿಸಲು ಅವರ ಸಹವರ್ತಿಗಳು ಹೆದರುತ್ತಿದ್ದಾರೆ ಎಂದು ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
- ಒಂದು ದೇಶದ ಫಾರೆಕ್ಸ್ ಮೀಸಲು ನಿಧಿ ಸಮರ್ಪಕವಾಗಿಲ್ಲದಿದ್ದರೆ ಅಂತಾರಾಷ್ಟ್ರೀಯ ಪಾವತಿ ಮಾಡುವುದು ಕಷ್ಟಕರವಾಗುತ್ತದೆ. ಆಮದು ಅಸಾಧ್ಯವಾಗುತ್ತದೆ.
ನವದೆಹಲಿ: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಮತ್ತೆ ಕುಸಿತ ಕಂಡ ಬೆನ್ನಲ್ಲೇ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ (BJP MP Dr. Subramanian Swamy) ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರದಿಂದ ನೋಟ್ ಬ್ಯಾನ್ ಕ್ರಮ ಜಾರಿಯಾದಾಗಿನಿಂದಲೂ ಸರ್ಕಾರದ ಆರ್ಥಿಕ ನೀತಿಗಳನ್ನು ನಿರಂತರವಾಗಿ ಕಟುವಾಗಿ ಟೀಕಿಸುತ್ತಾ ಬರುತ್ತಿರುವ ಮಾಜಿ ಜನತಾ ಪಕ್ಷ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ, ಇದೀಗ ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರುವುದು ನಿಶ್ಚಿತ ಎಂದು ಎಚ್ಚರಿಸಿದ್ದಾರೆ. ಆರ್ಥಿಕ ಮುಗ್ಗಟ್ಟು ತಡೆಯಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸಮರ್ಥವಾಗಿದೆ ಎಂದೂ ಸ್ವಾಮಿ ಟೀಕಿಸಿದ್ದಾರೆ.
“ನನ್ನ ಮಾತುಗಳನ್ನು ನೆನಪಲ್ಲಿಟ್ಟುಕೊಳ್ಳಿ: ಪ್ರಧಾನಿ ಮೋದಿ ಅವರಿಗೆ ಆರ್ಥಿಕ ಬಿಕ್ಕಟ್ಟು ತಲೆದೋರುತ್ತಿರುವ ವಿಚಾರವನ್ನು ತಿಳಿಸಲು ಅವರ ರಾಜಕೀಯ ಸಹವರ್ತಿಗಳು ಹೆದರುತ್ತಿದ್ದಾರೆ. ಆರ್ಥಿಕತೆಯ ಬಗ್ಗೆ ಸ್ವತಃ ಮೋದಿಗೇ ಏನೂ ಅರಿವಿಲ್ಲ, ಸರ್ಕಾರಕ್ಕೂ ಅರಿವಿಲ್ಲ. ಹೀಗಾಗಿ, ಆರ್ತಿಕ ಬಿಕ್ಕಟ್ಟು ಅನಿವಾರ್ಯ” ಎಂದು ಸುಬ್ರಮಣಿಯನ್ ಸ್ವಾಮಿ ಮಾರ್ಚ್ 17, ಶುಕ್ರವಾರ ಟ್ವೀಟ್ ಮಾಡಿದ್ದರು.
Mark my words: Modi’s political colleagues are too frightened to tell him like it is in the economy. Modi himself is ignorant of economics, so crisis is inevitable due to Govt being clueless. https://t.co/P9oqCEh7MZ
— Subramanian Swamy (@Swamy39) March 17, 2023
ಆರ್ಬಿಐ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಮಾರ್ಚ್ 10ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ 2.30 ಬಿಲಿಯನ್ ಡಾಲರ್ನಷ್ಟು (ಸುಮಾರು 19,000 ಕೋಟಿ ರುಪಾಯಿ) ಕಡಿಮೆಯಾಗಿದೆ. 562.40 ಬಿಲಿಯನ್ ಡಾಲರ್ ಇದ್ದ ಫಾರೆಕ್ಸ್ ರಿಸರ್ವ್ ನಿಧಿ ಇದೀಗ 560.003 ಬಿಲಿಯನ್ ಡಾಲರ್ಗೆ (46.22 ಲಕ್ಷ ಕೋಟಿ ರುಪಾಯಿ) ಇಳಿದಿದೆ. ಇದು ಕಳೆದ ಮೂರು ತಿಂಗಳಲ್ಲೇ ಅತ್ಯಂತ ಕಡಿಮೆ ಫಾರೆಕ್ಸ್ ಸಂಗ್ರಹ ಎನಿಸಿದೆ. ಹಿಂದಿನ ವಾರದಲ್ಲಿ, ಅಂದರೆ ಮಾರ್ಚ್ 3ರಂದು ಅಂತ್ಯಗೊಂಡ ವಾರದಲ್ಲಿ 1.46 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ ಏರಿಕೆ ಕಂಡಿತ್ತು.
ಇದನ್ನೂ ಓದಿ: Adani-Hindenburg Row: ಅದಾನಿ ತಪ್ಪು ಮಾಡಿದ್ದೇ ಆದಲ್ಲಿ… ಹಿಂಡನ್ಬರ್ಗ್ ವಿವಾದದ ಬಗ್ಗೆ ಅಮಿತ್ ಶಾ ಮಾತು ಇಲ್ಲಿದೆ
ಇನ್ನು, ವಾರ್ಷಿಕ ಆಧಾರದಲ್ಲಿ ಹೋಲಿಕೆ ಮಾಡುವುದಾದರೆ 62.23 ಬಿಲಿಯನ್ ಡಾಲರ್ನಷ್ಟು ಮೊತ್ತ ಫಾರೆಕ್ಸ್ ನಿಧಿಯಿಂದ ಕರಗಿಹೋಗಿದೆ. 2022 ಮಾರ್ಚ್ 10ರ ಅಂತ್ಯದ ವಾರದಲ್ಲಿದ್ದ ಫಾರೆಕ್ಸ್ ರಿಸರ್ವ್ ಸಂಗ್ರಹಕ್ಕಿಂತ ಈ ಬಾರಿ 62.23 ಬಿಲಿಯನ್ ಡಾಲರ್ ಕಡಿಮೆ ಆಗಿದೆ.
ಭಾರತದ ಫಾರೆಕ್ಸ್ ಮೀಸಲು ನಿಧಿ ಇಳಿಕೆಗೆ ಕಾರಣಗಳೇನು?
ಡಾಲರ್ ಎದುರು ರುಪಾಯಿ ಮೌಲ್ಯ ಗಣನೀಯವಾಗಿ ಇಳಿಕೆಯಾಗುವುದನ್ನು ನಿಯಂತ್ರಿಸಲು ಆರ್ಬಿಐ ಫಾರೆಕ್ಸ್ ನಿಧಿಯಲ್ಲಿದ್ದ ಕೆಲ ಡಾಲರ್ ಸಂಗ್ರಹವನ್ನು ಬಿಕರಿ ಮಾಡಿತ್ತು. ಇದರ ಪರಿಣಾಮವಾಗಿ ನಿಧಿಯ ಮೊತ್ತ ಕರಗಿದೆ.
ಫಾರೆಕ್ಸ್ ರಿಸರ್ವ್ಸ್ ಅಥವಾ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ವಿದೇಶೀ ಕರೆನ್ಸಿಗಳು, ಚಿನ್ನ, ಎಸ್ಡಿಆರ್ ಸಂಗ್ರಹಗಳು ಸೇರಿರುತ್ತವೆ. ಹಾಗೆಯೇ, ಐಎಂಎಫ್ ಜೊತೆಗಿನ ಮೀಸಲು ನಿಧಿಯೂ ಇದರಲ್ಲಿ ಇರುತ್ತದೆ.
ಇದನ್ನೂ ಓದಿ: Budget Survey: ಅರ್ಧಕ್ಕಿಂತ ಹೆಚ್ಚು ಮಂದಿಗೆ ಇಷ್ಟ; ಬಜೆಟೋತ್ತರ ಸಮೀಕ್ಷೆಯ ಕುತೂಹಲಕಾರಿ ಅಂಶಗಳು
ಫಾರೆಕ್ಸ್ ಮೀಸಲು ನಿಧಿ ಯಾಕೆ ಬೇಕು?
ಒಂದು ಆರ್ಥಿಕತೆ ಆರೋಗ್ಯಯುತವಾಗಿರಲು ಬೇಕಾದ ಪ್ರಮುಖ ಅಂಶಗಳಲ್ಲಿ ವಿದೇಶಿ ವಿನಿಮಯ ನಿಧಿ ಸಂಗ್ರಹವೂ ಒಂದು. ಅದರಲ್ಲೂ ಅಂತರರಾಷ್ಟ್ರೀಯ ವಹಿವಾಟುಗಳನ್ನು ಸಾಕಷ್ಟು ನಡೆಸುವ ಆರ್ಥಿಕತೆಗೆ ಫಾರೆಕ್ಸ್ ರಿಸರ್ವ್ ಬಹಳ ಮುಖ್ಯ. ಇದು ಅಂತರರಾಷ್ಟ್ರೀಯ ಪಾವತಿಗಳನ್ನು ಮಾಡಲು ಅತ್ಯಗತ್ಯ. ಫಾರೆಕ್ಸ್ ನಿಧಿಯಲ್ಲಿ ಸಾಕಷ್ಟು ಸಂಗ್ರಹ ಇಲ್ಲವಾದರೆ ಹೆಚ್ಚು ಆಮದು ಮಾಡಿಕೊಳ್ಳಲು ಆಗುವುದಿಲ್ಲ. ಪೆಟ್ರೋಲಿಯಂ ಕ್ಷೇತ್ರದಲ್ಲಿ ಆಮದಿನ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿದೆ. ಹಾಗೆಯೇ, ಬಹಳಷ್ಟು ಹೆಚ್ಚು ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನೂ ಭಾರತ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ, ಭಾರತಕ್ಕೆ ಫಾರೆಕ್ಸ್ ನಿಧಿಯಲ್ಲಿ ಹೆಚ್ಚು ಸಂಗ್ರಹ ಇರುವುದು ಅಗತ್ಯ.
ಫಾರೆಕ್ಸ್ ಸಂಗ್ರಹ ಕಡಿಮೆ ಆದರೆ ಏನು ದುಷ್ಪರಿಣಾಮ ಎಂಬುದಕ್ಕೆ ಪಾಕಿಸ್ತಾನವೇ ನಿದರ್ಶನವಾಗಿದೆ. ಆ ದೇಶಕ್ಕೆ ಪೆಟ್ರೋಲ್ ಆಮದು ಮಾಡಿಕೊಳ್ಳಲೂ ಆಗದಷ್ಟು ಫಾರೆಕ್ಸ್ ರಿಸರ್ವ್ ಕುಸಿದುಹೋಗಿದೆ. ಗೋಧಿ ಕೂಡ ಆಮದು ಸಾಧ್ಯವಾಗದೇ ಅಲ್ಲಿ ಆಹಾರಕ್ಕಾಗಿ ಹಾಹಾಕಾರವೇ ಆಗಿತ್ತು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ