ಭಾರತದ ಚಂದ್ರಯಾನ ಯೋಜನೆ ಬಗ್ಗೆ ವಿಶ್ವಶ್ರೀಮಂತ ಇಲಾನ್ ಮಸ್ಕ್ ಪ್ರತಿಕ್ರಿಯೆ ವಿಶೇಷವಾದುದು
Elon Musk reaction on Chadrayaan-3: ಭಾರತದ ಮೂರನೇ ಚಂದ್ರಯಾನ ಯೋಜನೆ ಬಗ್ಗೆ ಜಾಗತಿಕವಾಗಿ ಚರ್ಚಿತವಾಗುತ್ತಿದೆ. ಸ್ಪೇಸ್ಎಕ್ಸ್ ಸಂಸ್ಥಾಪಕ ಇಲಾನ್ ಮಸ್ಕ್ ಕೂಡ ಈ ಚರ್ಚೆಯಲ್ಲಿ ಪಾಲ್ಗೊಂಡು ಭಾರತದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.
ನವದೆಹಲಿ, ಆಗಸ್ಟ್ 23: ಭಾರತದ ಮೂರನೇ ಚಂದ್ರಯಾನ ಯೋಜನೆ (Chadrayaan-3) ವಿಶ್ವಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಎರಡನೇ ಚಂದ್ರಯಾನದಂತೆ ಈಗ ಮೂರನೇ ಯಾನವೂ ಕೂಡ ಅದರ ಬಜೆಟ್ ವಿಚಾರ ಸಂಬಂಧ ಚರ್ಚಿತವಾಗುತ್ತಿದೆ. ಇಸ್ರೋದಿಂದ ಕಳುಹಿಸಲಾಗಿರುವ ಚಂದ್ರಯಾನ-3 ಯೋಜನೆಯ ಒಟ್ಟು ವೆಚ್ಚ ಸುಮಾರು 75 ಮಿಲಿಯನ್ ಡಾಲರ್ ಮಾತ್ರ. ಅಂದರೆ ಸುಮಾರು 615 ಕೋಟಿ ರೂ ಮಾತ್ರವೇ. ಬಾಲಿವುಡ್ನ ಇಂಟರ್ಸ್ಟೆಲ್ಲಾರ್ ಸಿನಿಮಾದ (Interstellar Movie) ಬಜೆಟ್ ಗಾತ್ರವೇ 165 ಮಿಲಿಯನ್ ಡಾಲರ್ (ಸುಮಾರು 1,500 ಕೋಟಿ ರೂ) ಇದೆ. ಒಂದು ಹಾಲಿವುಡ್ ಮುಖ್ಯವಾಹಿನಿ ಸಿನಿಮಾಗೆ ಆಗುವ ವೆಚ್ಚಕ್ಕಿಂತಲೂ ಚಂದ್ರಯಾನ ಅಗ್ಗ ಎನಿಸಿದೆ. ಈ ವಿಚಾರ ಎಕ್ಸ್ ತಾಣದಲ್ಲಿ (ಟ್ವಿಟ್ಟರ್) ವೈರಲ್ ಆಗುತ್ತಿದ್ದು ಬಹಳ ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಎಕ್ಸ್ ಮುಖ್ಯಸ್ಥ ಇಲಾನ್ ಮಸ್ಕ್ ಅವರು ಇಂಥದ್ದೊಂದು ಚರ್ಚೆಯಲ್ಲಿ ಭಾಗಿಯಾಗಿರುವುದು ವಿಶೇಷ. ಮಂಗಳ ಗ್ರಹದಲ್ಲಿ ಮಾನವನ ವಸಾಹತು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿರುವ ಇಲಾನ್ ಮಸ್ಕ್ ಭಾರತದ ಚಂದ್ರಯಾಣ-3 ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.
‘ಇಂಟರ್ಸ್ಟೆಲ್ಲಾರ್ ಸಿನಿಮಾಗಿಂತಲೂ (165 ಮಿಲಿಯನ್ ಡಾಲರ್) ಭಾರತದ ಚಂದ್ರಯಾನ-3 (75 ಮಿಲಿಯನ್ ಡಾಲರ್) ಯೋಜನೆಯ ಬಜೆಟ್ ಕಡಿಮೆ ಇರುವುದು ನಿಜಕ್ಕೂ ಸೋಜಿಗ’ ಎಂದು ನ್ಯೂಸ್ಥಿಂಕ್ ಎಂಬ ಎಕ್ಸ್ ಖಾತೆಯಿಂದ ಟ್ವೀಟ್ ಆಗಿತ್ತು. ಇದಕ್ಕೆ ಇಲಾನ್ ಮಸ್ಕ್ ಸ್ಪಂದಿಸಿದ್ದು, ‘ಭಾರತಕ್ಕೆ ಇದರಿಂದ ಒಳ್ಳೆಯದು’ ಎಂದು ಹೇಳಿ ಕೊನೆಯಲ್ಲಿ ಭಾರತದ ಬಾವುಟದ ಇಮೋಜಿ ಹಾಕಿದ್ದಾರೆ.
Good for India 🇮🇳!
— Elon Musk (@elonmusk) August 22, 2023
ಇದನ್ನೂ ಓದಿ: Chandrayaan 3: ಇಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್ ತಪ್ಪಿದರೆ ಮುಂದೇನು?
ಭಾರತದ ಎರಡನೇ ಚಂದ್ರಯಾನ ಚಂದ್ರನ ಕಕ್ಷೆಯನ್ನು ತಲುಪಿದರೂ ಲ್ಯಾಂಡರ್ ಅನ್ನು ಇಳಿಸುವಾಗ ವೈಫಲ್ಯವಾಗಿ ಅದು ನೆಲಕ್ಕೆ ಅಪ್ಪಳಿಸಿ ಹಾಳಾಗಿಹೋಗಿತ್ತು. ಈಗ ಮೂರನೇ ಚಂದ್ರಯಾನವನ್ನು ಬಹಳ ಎಚ್ಚರಿಕೆಯಿಂದ ರೂಪಿಸಿ ಕಳುಹಿಸಲಾಗಿದೆ. ಈ ಲೇಖನ ಬರೆಯುವ ಹೊತ್ತಿನಲ್ಲಿ ಲ್ಯಾಂಡರ್ ಅನ್ನು ಇಳಿಸುವ ಕಾರ್ಯ ಶುರುವಾಗಿತ್ತು. ಇಡೀ ವಿಶ್ವದಲ್ಲಿ ಯಾರೂ ಇಳಿಯದ ಚಂದ್ರನ ಇನ್ನೊಂದು ಬದಿಗೆ ಭಾರತದ ನೌಕೆ ಇಳಿಯುತ್ತಿದೆ. ರಷ್ಯಾ ಕೂಡ ಇದೇ ಸೌತ್ ಪೋಲ್ನಲ್ಲಿ ಲ್ಯಾಂಡಿಂಗ್ಗೆ ಯತ್ನಿಸಿ ವಿಫಲವಾಗಿತ್ತು. ಭಾರತ ಯಶಸ್ವಿಯಾದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶವಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ