ಮುಂಬೈ: ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ವರದಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಅದಾನಿ ಸಮೂಹದ (Adani Group) ಕಂಪನಿಗಳ ಷೇರುಗಳಿಗೆ ಮಾರ್ಗನ್ ಸ್ಟ್ಯಾನ್ಲಿ (MSCI) ಹೇಳಿಕೆ ಮತ್ತೆ ಆಘಾತ ನೀಡಿದೆ. ಪರಿಣಾಮವಾಗಿ ಕಂಪನಿಗಳ ಷೇರು ಮೌಲ್ಯದಲ್ಲಿ ಗುರುವಾರದ ವಹಿವಾಟಿನಲ್ಲಿ ಮತ್ತೆ ಕುಸಿತವಾಗಿದೆ. ಅದಾನಿ ಸಮೂಹದ ಕಂಪನಿಗಳ ಫ್ರೀ ಫ್ಲೋಟ್ ಸ್ಟೇಟಸ್ ಪರಿಶೀಲನೆ ನಡೆಸುವುದಾಗಿ ಎಂಎಸ್ಸಿಐ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ ಷೇರು ಮಾರುಕಟ್ಟೆಗಳಲ್ಲಿ ಅದಾನಿ ಸಮೂಹ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಕುಸಿತವಾಗಿದೆ.
ಗುರುವಾರದ ವಹಿವಾಟಿನ ಅಂತ್ಯದ ವೇಳೆಗೆ ಅದಾನಿ ಎಂಟರ್ಪ್ರೈಸಸ್ ಷೇರು ಮೌಲ್ಯ ಶೇ 11ರಷ್ಟು ಕುಸಿದಿದೆ. ಅದಾನಿ ಪೋರ್ಟ್ಸ್ ಷೇರು ಮೌಲ್ಯದಲ್ಲಿ ಶೇ 2.83ರಷ್ಟು ಕುಸಿತವಾಗಿದೆ. ಅಂಬುಜಾ ಸಿಮೆಂಟ್ಸ್ ಷೇರು ಶೇ 6.95ರಷ್ಟು ಕುಸಿತ ಕಂಡಿದೆ. ಅದಾನಿ ಗ್ರೀನ್, ಅದಾನಿ ಪವರ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಟೋಟಲ್ ಗ್ಯಾಸ್, ಎನ್‌ಡಿಟಿವಿ ಶೇ 5ರ ಲೋವರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿದ್ದವು.
ಈ ಮಧ್ಯೆ, ಹಿಮಾಚಲ ಪ್ರದೇಶದಲ್ಲಿ ಅದಾನಿ ವಿಲ್ಮರ್ ಮತ್ತು ಅದಾನಿ ಸಮೂಹದ ಇತರ ಕಂಪನಿಗಳ ಕಚೇರಿ ಹಾಗೂ ಮಳಿಗೆಗಳಿಗೆ ಅಬಕಾರಿ, ತೆರಿಗೆ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದರು. ತೆರಿಗೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಈ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದಾನಿ ವಿಲ್ಮರ್ ಗ್ರೂಪ್ ಆರೋಪವನ್ನು ಅಲ್ಲಗಳೆದಿದ್ದು, ನಿಯಮಿತ ತಪಾಸಣೆ ಪ್ರಕ್ರಿಯೆಯ ಭಾಗವಾಗಿ ಅಧಿಕಾರಿಗಳು ಕಚೇರಿಗಳಿಗೆ ಬಂದು ಪರಿಶೀಲನೆ ನಡೆಸಿದ್ದಾರಷ್ಟೇ ಎಂದು ತಿಳಿಸಿತ್ತು. ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ ಅದಾನಿ ವಿಲ್ಮರ್ ಶೇ 4.99ರಷ್ಟು ಗಳಿಕೆ ದಾಖಲಿಸಿದೆ.
ಇದನ್ನೂ ಓದಿ: Adani Enterprises: ಅಪ್ಪರ್ ಸರ್ಕ್ಯೂಟ್‌ನಲ್ಲಿ ಅದಾನಿ ಎಂಟರ್ಪ್ರೈಸಸ್ ಷೇರು; ಮೌಲ್ಯದಲ್ಲಿ ಭಾರೀ ಜಿಗಿತ
ಪ್ರತಿ ಷೇರಿನೊಂದಿಗೆ ಹೊಂದಾಣಿಕೆ ಮಾಡಲಾದ ಮಾರುಕಟ್ಟೆ ಬಂಡವಾಳದ ಕುರಿತು ಲೆಕ್ಕಾಚಾರ ಹಾಕುವುದೇ ಫ್ರೀ ಫ್ಲೋಟ್ ಸ್ಟೇಟಸ್. ಸರಳವಾಗಿ ಹೇಳುವುದಾದರೆ, ಪ್ರತಿ ಷೇರಿನೊಂದಿಗೆ ಮಾರುಕಟ್ಟೆ ಬಂಡವಾಳ ಹೊಂದಾಣಿಕೆ ಮಾಡುವುದನ್ನು ಫ್ರೀ ಫ್ಲೋಟ್ ಸ್ಟೇಟಸ್ ಎಂದು ಕರೆಯಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಿಡ್ಕ್ಯಾಪ್ ಷೇರುಗಳ ಲೆಕ್ಕಾಚಾರ ಹಾಕುವ ಒಂದು ತಾಂತ್ರಿಕ ವಿಧಾನವಾಗಿದೆ. ಈ ವಿಧಾನದಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಷೇರುಗಳಿಗೆ ಈಕ್ವಿಟಿ ಷೇರು ಬೆಲೆಯನ್ನು ಮಲ್ಟಿಪ್ಲೈ ಮಾಡುವ ಮೂಲಕ ಲೆಕ್ಕಾಚಾರ ಹಾಕಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಪ್ರವರ್ತಕರ ಬಳಿ ಇರುವ ಷೇರುಗಳು, ಸರ್ಕಾರದ ಷೇರುಗಳು ಅಥವಾ ಕಂಪನಿಯ ಒಳಗಿನವರು ಹೊಂದಿರುವ ನಿಷ್ಕ್ರಿಯ ಷೇರುಗಳನ್ನು ಲೆಕ್ಕಹಾಕದೆ ಬಿಟ್ಟುಬಿಡಲಾಗುತ್ತದೆ. ಅಮೆರಿಕದ ಹೂಡಿಕೆ ನಿರ್ವಹಣಾ ಕಂಪನಿಯಾಗಿರುವ ಎಂಎಸ್ಸಿಐ ಅಥವಾ ಮಾರ್ಗನ್ ಸ್ಟ್ಯಾನ್ಲಿ ಫ್ರೀ ಫ್ಲೋಟ್ ಸ್ಟೇಟಸ್ ಲೆಕ್ಕಾಚಾರವನ್ನೂ ಪರಾಮರ್ಶೆ ಮಾಡುತ್ತದೆ.
Published On - 5:26 pm, Thu, 9 February 23