ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ತಮ್ಮ ಹೊಸ ಕಾರುಗಳ ಬೆಲೆ ಹೆಚ್ಚಳ ಘೋಷಿಸಿದ್ದು, ಟೊಯೊಟಾ ಇಂಡಿಯಾ(Toyota India) ಕಂಪನಿಯು ಕೂಡಾ ಇನೋವಾ ಕ್ರಿಸ್ಟಾ(Innova Crysta) ಬೆಲೆ ಹೆಚ್ಚಳ ಮಾಡಿದೆ. ಹೊಸ ಬದಲಾವಣೆಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಹೊಸ ಇನೋವಾ ಕ್ರಿಸ್ಟಾ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಹೊಸ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಟೊಯೊಟಾ ಕಂಪನಿಯು ಬಿಡುಗಡೆ ಮಾಡಿರುವ ಹೊಸ ದರಪಟ್ಟಿಯಲ್ಲಿ ಇನೋವಾ ಕ್ರಿಸ್ಟಾ ಎಂಪಿವಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.34 ಸಾವಿರದಿಂದ ಗರಿಷ್ಠ ರೂ. 37 ಸಾವಿರ ಹೆಚ್ಚಳವಾಗಿದ್ದು, ಹೊಸ ದರಗಳನ್ನು ಅಗಸ್ಟ್ 1ರಿಂದಲೇ ಅನ್ವಯಿಸುವಂತೆ ಜಾರಿಗೆ ತರಲಾಗಿದೆ.
ಇನೋವಾ ಕ್ರಿಸ್ಟಾ ಕಾರು ಪ್ರಮುಖ ಮೂರು ರೂಪಾಂತರಗಳಲ್ಲಿ ಸದ್ಯ ಖರೀದಿಗೆ ಲಭ್ಯವಿದ್ದು, ದರ ಹೆಚ್ಚಳದ ನಂತರ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.44 ಲಕ್ಷ ಬೆಲೆ ಪಡೆದುಕೊಂಡಿದೆ. ಸದ್ಯ 2.4 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು ಹೊಸ ಆವೃತ್ತಿಯೊಂದಿಗೆ ಹಲವಾರು ಬದಲಾವಣೆ ಪಡೆದುಕೊಂಡಿದ್ದು, ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಗಳೊಂದಿಗೆ ಗಮನಸೆಳೆಯುತ್ತಿದೆ.