Honda SP160: ಸಖತ್ ಸ್ಟೈಲಿಶ್ ಆಗಿರುವ ಹೋಂಡಾ ಎಸ್‌ಪಿ160 ಬೈಕ್ ಬಿಡುಗಡೆ

|

Updated on: Aug 08, 2023 | 9:07 PM

ಹೋಂಡಾ ಮೋಟಾರ್ ಸೈಕಲ್ ಕಂಪನಿಯು ತನ್ನ ಹೊಚ್ಚ ಹೊಸ ಎಸ್‌ಪಿ160 ಪ್ರೀಮಿಯಂ ಬೈಕ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ದೇಶದ ಅತಿದೊಡ್ಡ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಮೋಟಾರ್ ಸೈಕಲ್(Honda Motorcycles) ಕಂಪನಿಯು ಎಸ್‌ಪಿ ಬೈಕ್ ಸರಣಿಯನ್ನು ಪ್ರೀಮಿಯಂ ವಿಭಾಗಕ್ಕೆ ವಿಸ್ತರಿಸಿದ್ದು, ಹೊಸದಾಗಿ ಎಸ್‌ಪಿ160(SP160) ಬೈಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಬೈಕ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್ ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 1,17,500 ದರ ಹೊಂದಿದ್ದು, ಟಾಪ್ ಎಂಡ್ ವೆರಿಯೆಂಟ್ ರೂ. 1,21,900 ಬೆಲೆ ಹೊಂದಿದೆ.

ಹೊಸ ಬೈಕ್ ಖರೀದಿಗಾಗಿ ಹೋಂಡಾ ಕಂಪನಿಯು ಈಗಾಗಲೇ ಬುಕಿಂಗ್ ಆರಂಭಿಸಿದ್ದು, ಈ ತಿಂಗಳಾಂತ್ಯಕ್ಕೆ ವಿತರಣೆ ಆರಂಭಿಸುವ ಸಾಧ್ಯತೆಗಳಿವೆ. ಇನ್ನು ಹೊಸ ಎಸ್‌ಪಿ160 ಬೈಕ್ ಮಾದರಿಯು ಸಿಂಗಲ್ ಡಿಸ್ಕ್ ಮತ್ತು ಡ್ಯುಯಲ್ ಡಿಸ್ಕ್ ಎನ್ನುವ ಎರಡು ವೆರಿಯೆಂಟ್ ಗಳನ್ನು ಹೊಂದಿದ್ದು, ಇದು ಶೈನ್ ಮತ್ತು ಯುನಿಕಾರ್ನ್ ಬೈಕ್ ಮಾದರಿಗಳನ್ನು ಆಧರಿಸಿ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ಆಕರ್ಷಕ ಬೆಲೆಯಲ್ಲಿ ಓಲಾ ಎಸ್1 ಏರ್ ಇವಿ ಸ್ಕೂಟರ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್
ಎಸ್‌ಪಿ160 ಬೈಕ್ ಮಾದರಿಯಲ್ಲಿ ಹೋಂಡಾ ಕಂಪನಿಯು 162 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 13.46 ಹಾರ್ಸ್ ಪವರ್ ಮತ್ತು 14.58 NM ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರೊಂದಿಗೆ ಹೊಸ ಬೈಕ್ ಮಾದರಿಯು ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದ್ದು, ಯುನಿಕಾರ್ನ್ ಬೈಕ್ ಮಾದರಿಗಿಂತಲೂ ಉತ್ತಮ ಪರ್ಫಾಮೆನ್ಸ್ ಹೊಂದಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಹೊಸ ಎಸ್‌ಪಿ160 ಬೈಕ್ ಮಾದರಿಯು ಪ್ರಮುಖ ಆರು ಬಣ್ಣಗಳ ಆಯ್ಕೆಯೊಂದಿಗೆ ಆಕರ್ಷಕ ವಿನ್ಯಾಸ ಹೊಂದಿದ್ದು, ನೋಡಲು ಎಸ್‌ಪಿ125 ಮಾದರಿಯಂತೆ ಭಾಸವಾಗುತ್ತದೆ. ಆದರೆ ಕೆಲವು ವಿಭಿನ್ನ ವಿನ್ಯಾಸಗಳು ಗ್ರಾಹಕರನ್ನು ಸೆಳೆಯಲಿದ್ದು, V ಆಕಾರದಲ್ಲಿರುವ ಎಲ್‌ಇಡಿ ಹೆಡ್‌ಲೈಟ್, ಮಸ್ಕೂಲರ್ ಆಗಿರುವ ಫ್ಯೂಲ್ ಟ್ಯಾಂಕ್, ಹಿಂಬದಿಯ ಸವಾರರಿಗೂ ಆರಾಮದಾಯಕವಾಗಿರುವ ಸಿಂಗಲ್ ಪೀಸ್ ಸೀಟ್, ಸಿಂಗಲ್ ಗ್ರಾಬ್ ರೈಲ್, ಕ್ರೋಮ್ ಶೀಲ್ಡ್ ಮತ್ತು ಸುರಕ್ಷತೆಗಾಗಿ ಸೈಡ್-ಸ್ಲಂಗ್ ಎಕ್ಸಾಸ್ಟ್ ಮಫ್ಲರ್ ನೀಡಲಾಗಿದೆ.

ಹಾಗೆಯೇ ಹೊಸ ಬೈಕಿನಲ್ಲಿ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರಿಯರ್ ಮೊನೊ ಶಾಕ್ ಸಸ್ಷೆನ್ ಜೋಡಣೆ ಮಾಡಲಾಗಿದ್ದು, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್ ಜೊತೆಗೆ ಡಿಜಿಟಲ್ ಎಲ್ ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್ ಆಕರ್ಷಕವಾಗಿದೆ. ಇನ್ಸ್ಟ್ರುಮೆಂಟ್ ಕನ್ಸೋಲ್ ನಲ್ಲಿ ಸ್ಪೀಡೋ ಮೀಟರ್, ಓಡೋ ಮೀಟರ್ ಮತ್ತು ಫ್ಯೂಲ್ ಮಾಹಿತಿ ಲಭ್ಯವಾಗಲಿದ್ದು, ಸುರಕ್ಷತೆಗಾಗಿ ಹಝಾರ್ಡ್ ಸ್ವಿಚ್ ನೀಡಲಾಗಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ ಬೆಸ್ ವೆರಿಯೆಂಟ್ ಮುಂಭಾದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ಹೊಂದಿದ್ದು, ಡ್ಯುಯಲ್ ಡಿಸ್ಕ್ ಬ್ರೇಕ್ ವೆರಿಯೆಂಟ್ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಹೊಂದಿದ್ದು, ಉತ್ತಮ ಸವಾರಿಗಾಗಿ 17 ಇಂಚಿನ ಅಲಾಯ್ ವೀಲ್ಹ್ ಜೊತೆ ಎಂಆರ್ ಎಫ್ ನೈಲೋಗ್ರಿಪ್ ಟೈರ್‌ ಪಡೆದುಕೊಂಡಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ಜೊತೆ ಹೊಸ ಫೀಚರ್ಸ್ ಗಳೊಂದಿಗೆ ನವೀಕೃತ ಓಕಿ-90 ಇವಿ ಸ್ಕೂಟರ್ ಬಿಡುಗಡೆ

ಈ ಮೂಲಕ ಹೊಸ ಬೈಕ್ ಮಾದರಿಯು ಯಮಹಾ ಎಫ್ ಜೆಡ್, ಸುಜುಕಿ ಜಿಕ್ಸರ್, ಪಲ್ಸರ್ ಪಿ150 ಮತ್ತು ಟಿವಿಎಸ್ ಅಪಾಚೆ ಆರ್ ಟಿಆರ್ 160 2ವಿ ಸೇರಿದಂತೆ ಹಲವು ಬೈಕ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಕಂಪನಿಯ ಬೈಕ್ ಮಾರಾಟ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನೀರಿಕ್ಷೆಯಲ್ಲಿದೆ.